Accident

ಬಾಗಲಕೋಟೆಯಲ್ಲಿ ಮತ್ತೆ ‘ಮಾಸ್ಕ್ ಗ್ಯಾಂಗ್’ ಅಬ್ಬರ: ಇಳಕಲ್‌ನ ಕೆಇಬಿ ಕಾಲೋನಿಯಲ್ಲಿ ಖದೀಮರ ಹುನ್ನಾರ!

Share

• ಇಳಕಲ್‌ನಲ್ಲಿ ಮತ್ತೆ ಮಾಸ್ಕ್ ಗ್ಯಾಂಗ್ ಪ್ರತ್ಯಕ್ಷ
• ಸಿಸಿಟಿವಿಯಲ್ಲಿ ಸೆರೆಯಾಯ್ತು ಖದೀಮರ ಕಳ್ಳಾಟ
• ಕೈಯಲ್ಲಿ ರಾಡ್ ಹಿಡಿದು ಕನ್ನಕ್ಕೆ ಯತ್ನ
• ಕೆಇಬಿ ಕಾಲೋನಿ ನಿವಾಸಿಗಳಲ್ಲಿ ಮನೆಮಾಡಿದ ಆತಂಕ

ಚಡ್ಡಿ ಮತ್ತು ಲುಂಗಿ ಗ್ಯಾಂಗ್ ಬೆನ್ನಲ್ಲೇ ಈಗ ಬಾಗಲಕೋಟೆ ಜಿಲ್ಲೆಯ ಜನತೆಗೆ ‘ಮಾಸ್ಕ್ ಗ್ಯಾಂಗ್’ ನಡುಕ ಹುಟ್ಟಿಸಿದೆ. ರಾತ್ರೋರಾತ್ರಿ ಮುಖಕ್ಕೆ ಮಾಸ್ಕ್ ಧರಿಸಿ ಮನೆಗಳಿಗೆ ಕನ್ನ ಹಾಕಲು ಯತ್ನಿಸುತ್ತಿರುವ ಈ ಗ್ಯಾಂಗ್‌ನ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇಳಕಲ್ ನಗರದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಹಿಂದೆ ರಬಕವಿಯಲ್ಲಿ ಕಾಣಿಸಿಕೊಂಡಿದ್ದ ಮಾಸ್ಕ್ ಗ್ಯಾಂಗ್, ಈಗ ಇಳಕಲ್ ನಗರದ ಕೆಇಬಿ ಕಾಲೋನಿಯಲ್ಲಿ ಪ್ರತ್ಯಕ್ಷವಾಗಿದೆ. ಕರಿ ಬಣ್ಣದ ಟಿ-ಶರ್ಟ್, ಪ್ಯಾಂಟ್ ಧರಿಸಿ, ಮುಖಕ್ಕೆ ಕಪ್ಪು ಮಾಸ್ಕ್ ಹಾಕಿಕೊಂಡಿರುವ ನಾಲ್ಕೈದು ಖದೀಮರು ಕೈಯಲ್ಲಿ ಸಣ್ಣ ರಾಡ್ ಹಿಡಿದು ಮನೆಗಳ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದಾರೆ. ಕಳೆದ 15ನೇ ತಾರೀಖಿನಂದು ರಾತ್ರಿ ಸುಮಾರು 2:46ರ ಸುಮಾರಿಗೆ ಈ ಗ್ಯಾಂಗ್ ವಕೀಲರಾದ ವಿ.ಬಿ. ದಮ್ಮುರಮಠ ಅವರ ಮನೆಗೆ ನುಗ್ಗಲು ಯತ್ನಿಸಿದೆ. ಈ ಇಡೀ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜಿಲ್ಲೆಯಲ್ಲಿ ಕಳ್ಳರ ಹಾವಳಿ ಮತ್ತೆ ಮಿತಿಮೀರುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ವಕೀಲ ದಮ್ಮುರಮಠ ಅವರ ಮನೆಗೆ ನುಗ್ಗಿದ ಖದೀಮರು ಮನೆಯಲ್ಲಿದ್ದವರನ್ನು ಕಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಸ್ತುತ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಇಳಕಲ್ ನಗರ ಠಾಣೆ ಪೊಲೀಸರಿಗೆ ದೂರು ನೀಡಿ ಸೂಕ್ತ ಕ್ರಮಕ್ಕೆ ಮನವಿ ಮಾಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಚಡ್ಡಿ ಗ್ಯಾಂಗ್ ಮತ್ತು ಲುಂಗಿ ಗ್ಯಾಂಗ್ ಕಾಟದಿಂದ ಜನರು ಹೈರಾಣಾಗಿದ್ದರು, ಈಗ ಮಾಸ್ಕ್ ಗ್ಯಾಂಗ್ ಹಾವಳಿ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ರಾತ್ರಿ ಗಸ್ತು ಹೆಚ್ಚಿಸಿ ಖದೀಮರನ್ನು ಪತ್ತೆ ಹಚ್ಚಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Tags:

error: Content is protected !!