ಉಗಾರದಲ್ಲಿ ವೈದೂರ್ ಸಮಾಜದಿಂದ ₹2 ಕೋಟಿ ವೆಚ್ಚದ ಭವ್ಯ ದುರ್ಗಾದೇವಿ ಮಂದಿರ ಲೋಕಾರ್ಪಣೆ: ಪಶುಬಲಿ ತಡೆಗೆ ಶ್ರೀ ಬಸವಲಿಂಗ ಸ್ವಾಮೀಜಿ ಕರೆ

ಕಾಗವಾಡ ತಾಲೂಕಿನ ಉಗಾರದಲ್ಲಿ ಭಕ್ತಿಯ ಪರಾಕಾಷ್ಠೆ ಕಂಡುಬಂದಿದೆ. ವೈದೂರ್ ಸಮಾಜದವರು ಅದ್ದೂರಿ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ದುರ್ಗಾದೇವಿ ಮಂದಿರದ ಕಳಸಾರೋಹಣ ನೆರವೇರಿದ್ದು, ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಸಾವಿರಾರು ಭಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ಅಂತರಂಗದ ಭಕ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಉಗಾರದ ವೈದೂರ್ ಸಮಾಜದವರು ಭವ್ಯ ಮಂದಿರ ನಿರ್ಮಿಸುವ ಮೂಲಕ ಯುವ ಪೀಳಿಗೆಗೆ ಭಕ್ತಿಯ ಮಾರ್ಗ ತೋರಿಸಿದ್ದಾರೆ” ಎಂದು ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷರಾದ ಶ್ರೀ ಬಸವಲಿಂಗ ಸ್ವಾಮೀಜಿ ನುಡಿದರು. ಮಂಗಳವಾರ ನಡೆದ ಶ್ರೀ ದುರ್ಗಾದೇವಿ ಮಂದಿರದ ಕಳಸಾರೋಹಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ವೈದೂರ್ ಸಮಾಜದವರು ಶ್ರೀಕೃಷ್ಣ ಮತ್ತು ವೈಷ್ಣೋದೇವಿಯ ವಂಶಜರು ಎಂದು ಬಣ್ಣಿಸಿದರು. ಇದೇ ವೇಳೆ, ದೇವಿಯ ಹೆಸರಿನಲ್ಲಿ ಪಶುಬಲಿ ನೀಡುವುದನ್ನು ನಿಲ್ಲಿಸಬೇಕು ಮತ್ತು ಇಂತಹ ಆಚರಣೆಗಳನ್ನು ತಡೆಯಲು ಯುವಕರು ಸಂಕಲ್ಪ ಮಾಡಬೇಕು ಎಂದು ಕಳಕಳಿಯ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮೋಹನರಾವ್ ಶಹಾ ಮಾತನಾಡಿ ಸಮಾಜದ ಒಗ್ಗಟ್ಟನ್ನು ಶ್ಲಾಘಿಸಿದರೆ, ಕಸಾಪ ಅಧ್ಯಕ್ಷ ಡಾ. ಶಿವಗೌಡ ಕಾಗೆ ಅವರು ವೈದೂರ್ ಸಮಾಜ ಹಾಗೂ ಶಾಸಕ ರಾಜು ಕಾಗೆ ಅವರ ಕುಟುಂಬದ ನಡುವಿನ ದಶಕಗಳ ಬಾಂಧವ್ಯವನ್ನು ಸ್ಮರಿಸಿದರು. ಮುಖ್ಯೋಪಾಧ್ಯಾಯ ಎಸ್. ಎಸ್. ಮುಟಗಿ ಸಮಾಜದ ಇತಿಹಾಸವನ್ನು ಮೆಲುಕು ಹಾಕಿದರು. ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ಫಾತಿಮಾ ನದಾಫ್, ಸಮಾಜದ ಅಧ್ಯಕ್ಷ ಮೋಹನ ವೈದು ಸೇರಿದಂತೆ ಗೋಕಾಕ, ಅಂಕಲಿ, ಕುಡಚಿ ಭಾಗದ ನೂರಾರು ಭಕ್ತರು ಉಪಸ್ಥಿತರಿದ್ದರು. ಅರ್ಚಕ ಸುರೇಶ್ ಮಾಳಕರಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
