State

2026ರ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ವಿರೋಧ

Share

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಸಾಮಾಜಿಕ ನ್ಯಾಯ, ಸಮಾನತೆ ಬಗ್ಗೆ ಮಾತನಾಡುತ್ತಾ ವಿಶ್ವಗುರು ಬಸವಣ್ಣನವರ ಸ್ಮರಣೆ ಮಾಡಿದ ಸಂಸದೆ ಪ್ರಿಯಾಂಕಾ

ಬೆಳಗಾವಿ: ಪ್ರಸ್ತಾವಿತ 2026ರ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ದೇಶದ ಒಕ್ಕೂಟ ವ್ಯವಸ್ಥೆ ಹಾಗೂ ರಾಜ್ಯಗಳ ರಾಜಕೀಯ ಸಮತೋಲನಕ್ಕೆ ಧಕ್ಕೆಯುಂಟುಮಾಡುವ ಸಾಧ್ಯತೆ ಇದೆ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಸತೀಶ್ ಜಾರಕಿಹೊಳಿ ಗಂಭೀರ ಆತಂಕ ವ್ಯಕ್ತಪಡಿಸಿದರು.
ಸದನದಲ್ಲಿ ಮಾತನಾಡಿದ ಅವರು, ‘ಒಬ್ಬ ವ್ಯಕ್ತಿ, ಒಂದು ಮತ’ ಎಂಬ ತತ್ವದಡಿ ಕ್ಷೇತ್ರ ಮರುಹಂಚಿಕೆ ಸಂವಿಧಾನಾತ್ಮಕವಾದದ್ದೇ ಆಗಿದ್ದರೂ, ಅದರ ಪರಿಣಾಮವಾಗಿ ಪ್ರಗತಿ ಸಾಧಿಸಿದ ರಾಜ್ಯಗಳಿಗೆ ಅನ್ಯಾಯವಾಗಬಾರದು ಎಂದು ಎಚ್ಚರಿಸಿದರು. ಕುಟುಂಬ ಯೋಜನೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದಕ್ಷಿಣ ರಾಜ್ಯಗಳು ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾಗಿದ್ದು, ಕೇವಲ ಜನಸಂಖ್ಯೆ ಆಧಾರಿತ ಹಂಚಿಕೆ ಮಾಡಿದರೆ ಇವು ಸಂಸತ್ತಿನಲ್ಲಿ ತಮ್ಮ ಪ್ರತಿನಿಧಿತ್ವವನ್ನು ಕಳೆದುಕೊಳ್ಳುವ ಅಪಾಯ ಎದುರಿಸುತ್ತವೆ ಎಂದರು.
ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಿಗೆ ಹೆಚ್ಚು ಸ್ಥಾನಗಳು ಸಿಗುವುದರಿಂದ ದೇಶದ ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನ ಹದಗೆಡುವ ಸಾಧ್ಯತೆ ಇದೆ. ಇದರಿಂದ ಕೇಂದ್ರ ಸರ್ಕಾರದ ನೀತಿಗಳಲ್ಲಿ ಪ್ರಾದೇಶಿಕ ಪೂರ್ವಾಗ್ರಹ ಉಂಟಾಗಿ, ಅಭಿವೃದ್ಧಿ ಹೊಂದಿದ ರಾಜ್ಯಗಳು ನಿರ್ಲಕ್ಷ್ಯಕ್ಕೊಳಗಾಗುವ ಭೀತಿ ಇದೆ ಎಂದು ಹೇಳಿದರು.
ಈ ವಿಚಾರದಲ್ಲಿ ಆರ್ಥಿಕ ಅಂಶವನ್ನೂ ಉಲ್ಲೇಖಿಸಿದ ಅವರು, ಹೆಚ್ಚು ತೆರಿಗೆ ಕೊಡುಗೆ ನೀಡುವ ರಾಜ್ಯಗಳ ರಾಜಕೀಯ ಶಕ್ತಿ ಕುಗ್ಗಿದರೆ ‘ಪ್ರಾತಿನಿಧ್ಯವಿಲ್ಲದ ತೆರಿಗೆ’ ಎಂಬ ಭಾವನೆ ಮೂಡಿ ಪ್ರಾದೇಶಿಕ ಅಸಮಾಧಾನ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಈ ಹಿನ್ನೆಲೆಯಲ್ಲಿ ಹೊಸ ಸೂತ್ರ ರೂಪಿಸುವ ಅಗತ್ಯವಿದೆ ಎಂದು ಅವರು ಸಲಹೆ ನೀಡಿದರು. ಪ್ರಾತಿನಿಧ್ಯದ ಮರು ವ್ಯಾಖ್ಯಾನ, ರಾಜ್ಯಸಭೆಯ ಬಲವರ್ಧನೆ ಹಾಗೂ ಎಲ್ಲಾ ರಾಜ್ಯಗಳ ಒಮ್ಮತದ ಮೂಲಕವೇ ಇಂತಹ ಮಹತ್ವದ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಹಿಳಾ ಮೀಸಲಾತಿ ಕುರಿತು ಮಾತನಾಡಿದ ಅವರು, ಬಸವಣ್ಣ ಅವರ ‘ಅನುಭವ ಮಂಟಪ’ ಉದಾಹರಣೆ ನೀಡಿ, ಮಹಿಳೆಯರಿಗೆ ಪ್ರಾಚೀನ ಕಾಲದಿಂದಲೇ ಅವಕಾಶ ನೀಡಲಾಗಿತ್ತು ಎಂದು ಹೇಳಿದರು. ಮಹಿಳಾ ಮೀಸಲಾತಿ ಮಸೂದೆ ತಡವಿಲ್ಲದೆ ತಕ್ಷಣ ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.
ಪ್ರಜಾಪ್ರಭುತ್ವವು ಕೇವಲ ಸಂಖ್ಯೆಗಳ ಆಟವಲ್ಲ, ಸಮಾನತೆ ಮತ್ತು ನ್ಯಾಯದ ಮೇಲೆ ಆಧಾರಿತ ವ್ಯವಸ್ಥೆಯಾಗಿರಬೇಕು. ಜನಸಂಖ್ಯೆ ಮತ್ತು ಒಕ್ಕೂಟ ನ್ಯಾಯ ಎರಡನ್ನೂ ಸಮತೋಲನಗೊಳಿಸುವ ಸೂತ್ರ ಸಿದ್ಧವಾಗುವವರೆಗೆ ಮಸೂದೆಯನ್ನು ಮುಂದೂಡಬೇಕು ಎಂದು ಸದನವನ್ನು ಅವರು ಆಗ್ರಹಿಸಿದರು.

Tags:

error: Content is protected !!