• ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ
• ಯೋಗೇಶ್‌ಗೌಡ ಕೊಲೆ ಕೇಸ್: ಐತಿಹಾಸಿಕ ತೀರ್ಪು
• ಪೊಲೀಸ್ ಅಧಿಕಾರಿಗೆ ಏಳು ವರ್ಷಗಳ ಶಿಕ್ಷೆ
• ಧಾರವಾಡ ಹತ್ಯಾಕಾಂಡಕ್ಕೆ ಸಿಕ್ಕಿತು ನ್ಯಾಯ!

ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ದೋಷಿಗಳಾದ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಿದೆ.
ಕೊನೆಯ ಅಪರಾಧಿ ಪೊಲೀಸ್ ಅಧಿಕಾರಿ ಚನ್ನಕೇಶವ ಟಿಂಗ್ರಿಕರ್ ಅವರಿಗೆ 7 ವರ್ಷ ಸಾಧಾರಣ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಶಿಕ್ಷೆ ಪ್ರಕಟಿಸಿದರು. ವಿಕ್ರಮ್, ಕೀರ್ತಿ ಕುಮಾರ್, ಸಂದೀಪ್ ಸವದತ್ತಿ, ವಿನಾಯಕ್ ಕಟಗಿ, ಮಹಾಬಲೇಶ್ವರ್ ಹೊಂಗಲ್ ಅಲಿಯಾಸ್ ಮುದಕ, ಸಂತೋಷ್ ಸವದತ್ತಿ, ಎಂ.ದಿನೇಶ್, ಎಸ್.ಅಶ್ವತ್, ಕೆ.ಎಸ್.ಸುನೀಲ್, ನಜೀರ್ ಅಹ್ಮದ್, ಶನ್ವಾಜ್, ಕೆ.ನೂತನ್, ಸಿ.ಹರ್ಷಿತ್, ಚಂದ್ರಶೇಖರ್ ಇಂಡಿ ಅಲಿಯಾಸ್, ಚಂದ್ರು ಮಾಮ, ವಿಕಾಸ್ ಕಲಬುರ್ಗಿ ಜೀವಾವಧಿ ಶಿಕ್ಷೆಗೆ ಗುರಿಯಾದವರು.
ಅಪರಾಧಿಗಳಿಗೆ ಐಪಿಸಿ ಸೆಕ್ಷನ್ 302(ಕೊಲೆ) ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ಸೆಕ್ಷನ್ 120(ಬಿ) (ಕೊಲೆಗೆ ಪಿತೂರಿ) ಅಡಿಯಲ್ಲಿ 7 ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ. ಎರಡೂ ಶಿಕ್ಷೆಗಳನ್ನು ಏಕಕಾಲಕ್ಕೆ ಅನುಭವಿಸಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಪ್ರಕರಣ ಸಂಬಂಧ ಸಿಬಿಐ ತನಿಖೆ ನಡೆಸಿ ಸಲ್ಲಿಸಿದ್ದ ಆರೋಪಪಟ್ಟಿಯನ್ನು ಪರಿಗಣಿಸಿದ್ದ ನ್ಯಾಯಾಲಯ ಬುಧವಾರ ಎಲ್ಲ ಆರೋಪಿಗಳನ್ನು ‘ದೋಷಿಗಳು’ ಎಂದು ಪ್ರಕಟಿಸಿತ್ತು.
