Kittur

ಕಿತ್ತೂರು ತಾಲೂಕಿನಲ್ಲಿ ಸಹಕಾರಿ ಸಂಘಗಳ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ

Share

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿ ವಿವಿಧ ಸಹಕಾರಿ ಸಂಘಗಳ ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರಿಗಾಗಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭವು ಅತ್ಯಂತ ವೈಭವದಿಂದ ಜರುಗಿತು.

ಈ ಕಾರ್ಯಕ್ರಮದಲ್ಲಿ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ ಹಾಗೂ ಬಿಜೆಪಿ ಮುಖಂಡ ಡಾ. ಪರವಣ್ಣವರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ರೈತ ಗೀತೆ ಮತ್ತು ದೀಪ ಬೆಳಗಿಸುವ ಮೂಲಕ ಅಧಿಕೃತ ಚಾಲನೆ ನೀಡಲಾಯಿತು.

ಅಭಿನಂದನಾ ಸಮಾರಂಭವು ಮೂಲತಃ ಪಕ್ಷಾತೀತವಾಗಿ ಆಯೋಜನೆಯಾಗಿದ್ದರೂ, ವೇದಿಕೆಯ ಮೇಲೆ ರಾಜಕೀಯ ವಾಕ್ಸಮರ ಕಂಡುಬಂದಿದ್ದು ವಿಶೇಷವಾಗಿತ್ತು. ಕಿತ್ತೂರು ಕ್ಷೇತ್ರದ ಬಿಜೆಪಿ ಮುಖಂಡ ಡಾ. ಪರವಣ್ಣವರ ಮಾತನಾಡುವ ವೇಳೆ ತಮ್ಮದೇ ಪಕ್ಷದ ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು. ಈ ಕಾರ್ಯಕ್ರಮಕ್ಕೆ ಜನ ಬರುವುದಿಲ್ಲ ಎಂದು ಟೀಕಿಸಿದವರಿಗೆ ಇವತ್ತಿನ ಜನಸಮೂಹವೇ ಉತ್ತರ ನೀಡಿದೆ ಎಂದು ಹೇಳಿದ ಅವರು, ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳು ಆಗಲಿವೆ ಎಂದು ಭವಿಷ್ಯ ನುಡಿದರು. ಅಲ್ಲದೆ, ರಾಜಕೀಯದಲ್ಲಿ ನಮಗೆ ಆದ ಅವಮಾನಕ್ಕೆ ಚಕ್ರಬಡ್ಡಿ ಸಮೇತ ಲೆಕ್ಕ ಚುಕ್ತಾ ಮಾಡುವ ಸಮಯ ಬಂದಿದೆ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಅವರು, ಸಹಕಾರಿ ರಂಗದಲ್ಲಿ ನಾವು ಯಾವುದೇ ರಾಜಕೀಯ ಭೇದಭಾವ ಮಾಡದೆ ರೈತರ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ ಮತ್ತು ಸ್ಥಳೀಯ ಶಾಸಕರೊಂದಿಗೆ ಸೇರಿ ರೈತರಿಗೆ ಹೆಚ್ಚಿನ ಸೇವೆ ಒದಗಿಸಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಅವರು ಮಾತನಾಡಿ, ರೈತರಿಗೆ ಸಣ್ಣಪುಟ್ಟ ಸಾಲ ಸೌಲಭ್ಯಗಳನ್ನು ನೀಡಲು ಬ್ಯಾಂಕ್ ಸದಾ ಸಿದ್ಧವಿದ್ದು, ಕಿತ್ತೂರು ತಾಲೂಕಿನಲ್ಲಿ ಹೊಸ ಕಚೇರಿಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದರು. ಬ್ಯಾಂಕಿನ ವಿರುದ್ಧದ ಸುಳ್ಳು ಆರೋಪಗಳಿಗೆ ಸಾರ್ವಜನಿಕರು ಕಿವಿಗೊಡಬಾರದೆಂದು ಅವರು ಇದೇ ವೇಳೆ ಮನವಿ ಮಾಡಿದರು.

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿ, ಇದು ರೈತರ ಪರವಾದ ಕಾರ್ಯಕ್ರಮವಾಗಿದ್ದು ಇಲ್ಲಿ ಎಲ್ಲರೂ ನಮ್ಮವರೇ ಎಂಬ ಭಾವನೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು. ಡಿಸಿಸಿ ಬ್ಯಾಂಕ್ ಕುರಿತಾದ ಗೊಂದಲಗಳಿಗೆ ಶೀಘ್ರದಲ್ಲೇ ಪತ್ರಿಕಾಗೋಷ್ಠಿ ಮೂಲಕ ಸ್ಪಷ್ಟನೆ ನೀಡುವುದಾಗಿ ಅವರು ತಿಳಿಸಿದರು. ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅವರು ಮಾತನಾಡಿ, ಕ್ಷೇತ್ರದಲ್ಲಿ ರೈತರ ಅಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ತರಲಾಗುವುದು ಹಾಗೂ ಮಹಿಳೆಯರಿಗೆ ಸ್ವಯಂ ಉದ್ಯೋಗದ ಅವಕಾಶಗಳನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದ್ದ ಎಲ್ಲ ಪದಾಧಿಕಾರಿಗಳನ್ನು ಮತ್ತು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

Tags:

error: Content is protected !!