ಬೆಳಗಾವಿ ನಗರದ ಪ್ರಮುಖ ವ್ಯಾಪಾರಿ ಪ್ರದೇಶಗಳಾದ ಗಣಪತ್ ಗಲ್ಲಿ ಹಾಗೂ ಮಾರುತಿ ಗಲ್ಲಿಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಇಂದು ದಿಢೀರ್ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ರಸ್ತೆಯನ್ನು ಅತಿಕ್ರಮಿಸಿಕೊಂಡು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದ ಬೀದಿಬದಿ ವ್ಯಾಪಾರಿಗಳು ಹಾಗೂ ಅಂಗಡಿಕಾರರಿಗೆ ಪಾಲಿಕೆ ಸಿಬ್ಬಂದಿ ಸ್ಥಳದಲ್ಲೇ ಖಡಕ್ ಎಚ್ಚರಿಕೆ ನೀಡಿದ್ದಾರೆ.


ಬೆಳಗಾವಿ ನಗರದ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಗಣಪತ್ ಗಲ್ಲಿ ಹಾಗೂ ಮಾರುತಿ ಗಲ್ಲಿಯಲ್ಲಿ ಕಾರ್ಯಾಚರಣೆಗೆ ಇಳಿದ ಮಹಾನಗರ ಪಾಲಿಕೆಯ ಅತಿಕ್ರಮಣ ತೆರವು ತಂಡವು, ರಸ್ತೆಯ ಮೇಲೆ ನಿಯಮ ಬಾಹಿರವಾಗಿ ಇಡಲಾಗಿದ್ದ ಅಂಗಡಿಗಳ ನಾಮಫಲಕಗಳು, ಬೃಹತ್ ಜಾಹೀರಾತು ಬೋರ್ಡ್‌ಗಳು ಹಾಗೂ ರಸ್ತೆಯ ಮೇಲೆ ಪಸರಿಸಲಾಗಿದ್ದ ಹತ್ತಾರು ವ್ಯಾಪಾರೀ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿತು.


ಮಹಾನಗರ ಪಾಲಿಕೆಯ ಈ ದಿಢೀರ್ ಕ್ರಮದಿಂದಾಗಿ ಮಾರುಕಟ್ಟೆಯ ರಸ್ತೆಗಳನ್ನು ಅತಿಕ್ರಮಿಸಿಕೊಂಡಿದ್ದ ಅಂಗಡಿಕಾರರು ಹಾಗೂ ಬೀದಿಬದಿ ವ್ಯಾಪಾರಿಗಳು ಕೆಲಕಾಲ ಆತಂಕಕ್ಕೆ ಒಳಗಾಗಿದ್ದು, ಮುಂದಿನ ದಿನಗಳಲ್ಲಿ ರಸ್ತೆ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.
