ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಉಪಚುನಾವಣೆ ಪೂರ್ವಭಾವಿ ಸಭೆಯು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಸಮ್ಮುಖದಲ್ಲೇ ಕಾರ್ಯಕರ್ತರು ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.
ಬಾಗಲಕೋಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಉಪಚುನಾವಣೆಯ ಕುರಿತು ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯು ತೀವ್ರ ವಾಗ್ವಾದಕ್ಕೆ ಸಾಕ್ಷಿಯಾಯಿತು. ಸಭೆಯ ನಡುವೆಯೇ ಎದ್ದುನಿಂತ ಹನುಮಂತ ಎಂಬ ಕಾರ್ಯಕರ್ತ, ಪಕ್ಷದಲ್ಲಿ ನಗರ ಮತ್ತು ಗ್ರಾಮೀಣ ಭಾಗದ ಕಾರ್ಯಕರ್ತರ ನಡುವೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ರೊಚ್ಚಿಗೆದ್ದರು. ವೇದಿಕೆಯ ಮೇಲಿದ್ದ ಮುಖಂಡರನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡ ಅವರು, “ನಗರಕ್ಕೆ ಒಂದು ನ್ಯಾಯ, ಗ್ರಾಮೀಣ ಭಾಗಕ್ಕೆ ಮತ್ತೊಂದು ನ್ಯಾಯವೇ?” ಎಂದು ಪ್ರಶ್ನಿಸಿ ಗದ್ದಲ ಸೃಷ್ಟಿಸಿದರು.
ಸಚಿವ ಆರ್.ಬಿ. ತಿಮ್ಮಾಪುರ ಅವರ ಸಮ್ಮುಖದಲ್ಲೇ ಈ ಹೈಡ್ರಾಮಾ ನಡೆದಿದ್ದು, ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆ ಇತರ ಮುಖಂಡರು ಮಧ್ಯಪ್ರವೇಶಿಸಿದರು. ಕೂಗಾಡುತ್ತಿದ್ದ ಕಾರ್ಯಕರ್ತ ಹನುಮಂತನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರಾದರೂ, ಆತ ಮಣಿಯದಿದ್ದಾಗ ಕೊನೆಗೆ ಸಭೆಯಿಂದ ಹೊರಕ್ಕೆ ಕಳುಹಿಸಲಾಯಿತು. ಇತ್ತೀಚೆಗಷ್ಟೇ ಮಹಿಳಾ ಘಟಕದ ಸಭೆಯಲ್ಲೂ ಇಂತದ್ದೇ ಗದ್ದಲ ನಡೆದಿತ್ತು, ಈಗ ಮತ್ತೆ ಕಾರ್ಯಕರ್ತರ ನಡುವಿನ ಅಸಮಾಧಾನ ಸ್ಫೋಟಗೊಂಡಿರುವುದು ಪಕ್ಷದ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
