ಬಾಗಲಕೋಟೆಯ ನವನಗರದಲ್ಲಿ ಹೆಜ್ಜೇನುಗಳ ಹಿಂಡು ಅಕ್ಷರಶಃ ಅಟ್ಟಹಾಸ ಮೆರೆದಿವೆ. ನಗರಸಭೆ ಬಳಿಯ ಸೋಡಾ ಅಂಗಡಿಯಲ್ಲಿ ನಿಂತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ದಾಳಿ ಮಾಡಿದ ಜೇನುಹುಳುಗಳು, ಸುಮಾರು ಎರಡು ಕಿಲೋಮೀಟರ್ ದೂರದವರೆಗೆ ಬೆನ್ನಟ್ಟಿ ಕಚ್ಚಿದ ಭೀಕರ ಘಟನೆ ನಡೆದಿದೆ.
ಬಾಗಲಕೋಟೆ ನವನಗರದ 32ನೇ ಸೆಕ್ಟರ್ ನಿವಾಸಿ ಮಹ್ಮದ್ ರಫೀಕ್ ಎಂಬುವವರು ಬ್ಯಾಂಕ್ ಕಟ್ಟಡವೊಂದರ ಬಳಿ ಇರುವ ಸೋಡಾ ಅಂಗಡಿಯಲ್ಲಿ ನಿಂತಿದ್ದಾಗ ಈ ಘಟನೆ ಸಂಭವಿಸಿದೆ. ಬ್ಯಾಂಕ್ ಕಟ್ಟಡದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನುಗಳು ಏಕಾಏಕಿ ರಫೀಕ್ ಅವರ ಮೇಲೆ ಮುಗಿಬಿದ್ದಿವೆ. ಜೇನುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ರಫೀಕ್ ತಮ್ಮ ಮುಖಕ್ಕೆ ವೇಲ್ (ಮೋರೆ ವಸ್ತ್ರ) ಹಾಕಿಕೊಂಡು ಸುಮಾರು 2 ಕಿಲೋಮೀಟರ್ ದೂರದವರೆಗೂ ದಿಕ್ಕಾಪಾಲಾಗಿ ಓಡಿದ್ದಾರೆ. ಆದರೂ ಬಿಡದ ಜೇನುಗಳ ಹಿಂಡು ಅವರ ಮುಖದ ಮೇಲೆ ತೀವ್ರವಾಗಿ ದಾಳಿ ನಡೆಸಿವೆ.
ರಫೀಕ್ ಅವರು ಜೇನುಹುಳುಗಳ ದಾಳಿಗೆ ಸಿಲುಕಿ ನರಳುತ್ತಿರುವುದನ್ನು ಗಮನಿಸಿದ ಸ್ಥಳೀಯ ಯುವಕ ಹೇಮಂತ್ ಚೂರಿ ಹಾಗೂ ಅವರ ಸ್ನೇಹಿತರು ತಕ್ಷಣವೇ ಧಾವಿಸಿ ಅವರನ್ನು ರಕ್ಷಿಸಿದ್ದಾರೆ. ಕೂಡಲೇ ಅವರನ್ನು ಕಾರಿನಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ತಪಾಸಣೆ ನಡೆಸಿದಾಗ ರಫೀಕ್ ಅವರ ಮುಖವೊಂದರಲ್ಲೇ ಬರೋಬ್ಬರಿ 50ಕ್ಕೂ ಹೆಚ್ಚು ಜೇನುಹುಳುಗಳ ಮುಳ್ಳುಗಳು ಕಂಡುಬಂದಿವೆ. ಸದ್ಯ ವೈದ್ಯರು ಮುಳ್ಳುಗಳನ್ನು ಹೊರತೆಗೆದು ಚಿಕಿತ್ಸೆ ನೀಡುತ್ತಿದ್ದು, ಅದೃಷ್ಟವಶಾತ್ ರಫೀಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
