ಬೆಳಗಾವಿಯ ಆದರ್ಶ ನಗರ ವಡಗಾಂವ್‌ನ ಶ್ರೀರಾಮ ಕಾಲನಿಯಲ್ಲಿ ಕಳೆದ ಹದಿನೈದು ದಿನಗಳಿಂದ ಮನೆಯವರ ನಿದ್ದೆಗೆಡಿಸಿದ್ದ ಬೃಹತ್ ಹಾವನ್ನು ಕೊನೆಗೂ ರಕ್ಷಿಸಲಾಗಿದೆ. ಪತ್ರಕರ್ತ ಶ್ರೀಕಾಂತ್ ಕಾಕತೀಕರ್ ಅವರ ಮನೆಯ ಕಿಚನ್‌ನಲ್ಲಿ ಅಡಗಿ ಕುಳಿತಿದ್ದ ಹಾವನ್ನು ಮಹಿಳಾ ಸರ್ಪಮಿತ್ರರೊಬ್ಬರು ಅತ್ಯಂತ ಸಾಹಸದಿಂದ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.


ವಡಗಾಂವ್‌ನ ಆದರ್ಶ ನಗರದ ಶ್ರೀರಾಮ ಕಾಲನಿ ನಿವಾಸಿ, ಪತ್ರಕರ್ತ ಶ್ರೀಕಾಂತ್ ಕಾಕತೀಕರ್ ಅವರ ಮನೆಯಲ್ಲಿ ಕಳೆದ 15 ದಿನಗಳಿಂದ ಹಾವಿನ ಓಡಾಟವಿತ್ತು. ಮನೆಯ ಸದಸ್ಯರಿಗೆ ಹಾವು ಹಲವು ಬಾರಿ ಕಾಣಿಸಿಕೊಂಡರೂ ಸಹ, ಎಷ್ಟು ಹುಡುಕಿದರೂ ಅದು ಎಲ್ಲಿ ಅಡಗಿದೆ ಎಂಬುದು ಪತ್ತೆಯಾಗುತ್ತಿರಲಿಲ್ಲ.

ಆದರೆ ನಿನ್ನೆ ಸಂಜೆ 5 ಗಂಟೆಯ ಸುಮಾರಿಗೆ ಈ ಧಾಮನ್ (ಕರೆನಾಗ) ತಳಿಯ ಹಾವು ಹಠಾತ್ತನೆ ಅಡುಗೆ ಮನೆಯಲ್ಲಿ ಪ್ರತ್ಯಕ್ಷವಾಗಿದ್ದರಿಂದ ಕುಟುಂಬಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ತಕ್ಷಣವೇ ಅವರು ಪ್ರಸಿದ್ಧ ಸರ್ಪಮಿತ್ರ ಅನಂತ್ ಚಿಟ್ಟಿ ಅವರಿಗೆ ಕರೆ ಮಾಡಿ ನೆರವು ಕೋರಿದ್ದಾರೆ.
ಈ ವೇಳೆ ಅನಂತ್ ಚಿಟ್ಟಿ ಅವರು ತಮ್ಮ ಧರ್ಮಪತ್ನಿಯನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದು, ಅವರು ಅಡುಗೆ ಕೋಣೆಯಲ್ಲಿದ್ದ ಹಾವನ್ನು ಯಾವುದೇ ತೊಂದರೆಯಾಗದಂತೆ ಅತ್ಯಂತ ಚಾಣಾಕ್ಷತನದಿಂದ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾವು ಸಿಕ್ಕಿಬಿದ್ದ ನಂತರವಷ್ಟೇ ಮನೆಯವರು ನಿರಾಳರಾಗಿದ್ದು, ರಕ್ಷಿಸಲಾದ ಹಾವನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
