ನಿಪ್ಪಾಣಿ ಶ್ರೀ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಜೊಲ್ಲೆ ಗ್ರುಪ್ ಸಹಯೋಗದಲ್ಲಿ ಆಯೋಜಿಸಿದ್ದ ಭವ್ಯ ಕೃಷಿ ಉತ್ಸವದಲ್ಲಿ ವಿವಿಧ ಜಾತಿಯ ಶ್ವಾನಗಳ ಪ್ರದರ್ಶನ ನಡೆಯಿತು.


ಕೃಷಿ ಉತ್ಸವಕ್ಕೆ ಆಗಮಿಸಿದ್ದ ರೈತರು-ಜನರು ಶ್ವಾನ ಪ್ರದರ್ಶನ ಕಣ್ಣುಂಬಿಕೊಂಡರು.ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾ ರಾಷ್ಟ್ರದ ವಿವಿಧ ಭಾಗಗಳಿಂದ ಶ್ವಾನ ಪ್ರೇಮಿಗಳು ತಮ್ಮ ಶ್ವಾನಗಳನ್ನು ಕರೆದುಕೊಂಡು ಬಂದಿದ್ದರು. ವಿವಿಧ ತಳಿಗಳ ಶ್ವಾನಗಳು ವೇದಿಕೆಯಲ್ಲಿ ಪ್ರದರ್ಶನ ನೀಡಿದಾಗ ಪ್ರೇಕ್ಷಕರು ಕೇಕೆ-ಶಿಳ್ಳೆ ಚಪ್ಪಾಳೆ ಹಾಕಿದರು. ಶ್ವಾನಗಳ ಶಿಸ್ತು, ಚುರುಕುತನ ಹಾಗೂ ತರಬೇತಿ ಪ್ರದರ್ಶನಗಳು ಎಲ್ಲರ ಗಮನ ಸೆಳೆದವು.
ಶ್ವಾನ ಸ್ಪರ್ಧೆಯಲ್ಲಿ ಬೆಳಗಾವಿಯ ಅಕ್ಷಯ ಮುರಡಕರ ಅವರ ಗೋಲ್ಡನ್ ರಾಟ್ ವೀಲರ್ ಜಾತಿಯ ಶ್ವಾನ ಪ್ರಥಮ ಸ್ಥಾನ ಪಡೆಯಿತು. ಮಹಾರಾಷ್ಟ್ರದ ಜೈಸಿಂಗಪುರದ ಮಹೇಶ ಹಿತಾರೆ ಅವರ ಬೆಂಗಾಲ್ ತಳಿಯ ಶ್ವಾನ ದ್ವಿತೀಯ, ಸಾಂಗ್ಲಿಯ ಸತೀಶ ಜಾಧವ ಅವರ ಅಬ್ರಾಡಮ್ ತಳಿಯ ಶ್ವಾನ ತೃತೀಯ, ಜೈಸಿಂಗಪುರದ ಸುಶಾಂತ ಪಾಟೀಲ ಅವರ ಪಗ್ಗೆ ಜಾತಿಯ ಶ್ವಾನ ನಾಲ್ಕನೇ ಸ್ಥಾನ ಪಡೆದರೆ, ಶಿರೋಳದ ನಿಲೇಶ ಮೋರೆ ಅವರ ಡೋಬರ್ಮ್ಯಾನ್ ಜಾತಿಯ ಶ್ವಾನ ಐದನೇ ಸ್ಥಾನ ಪಡೆಯಿತು.
ವಿಜೇತ ಶ್ವಾನಗಳ ಮಾಲೀಕರಿಗೆ ಸಂಪಾದನ ಸ್ವಾಮೀಜಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಶಾಸಕಿ ಶಶಿಕಲಾ ಜೊಲ್ಲೆ ಬಸವಪ್ರಸಾದ ಜೊಲ್ಲೆ ಬಹುಮಾನ ವಿತರಿಸಿದರು. ಕೃಷಿ ಉತ್ಸವ ನಿಮಿತ್ತ ಆಯೋಜಿಸಿದ್ದ ಶ್ವಾನ ಪ್ರದರ್ಶನ ಎಲ್ಲರಲ್ಲೂ ಉತ್ಸಾಹ ಮೂಡಿಸಿತು.
