ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ವರದಕ್ಷಿಣೆಗಾಗಿ ಏಳು ತಿಂಗಳ ಗರ್ಭಿಣಿಯನ್ನು ಕೊಲೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇಡೀ ಗ್ರಾಮವೇ ಕಂಬನಿ ಮಿಡಿಯುತ್ತಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ನಿವಾಸಿ ದೀಪಾ ಮಗದುಮ್ಮ ಎಂಬ ಗರ್ಭಿಣಿ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೃತ ದೀಪಾ ಏಳು ತಿಂಗಳ ಗರ್ಭಿಣಿಯಾಗಿದ್ದು, ಆಕೆಯ ಸಾವು ಸಹಜವಲ್ಲ, ಬದಲಾಗಿ ಗಂಡ ಮತ್ತು ಮಾವ ಸೇರಿ ಮಾಡಿರುವ ಕೊಲೆ ಎಂದು ದೀಪಾ ಅವರ ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ. ತವರು ಮನೆಯಿಂದ ಹಣ ಮತ್ತು ಬಂಗಾರ ತರುವಂತೆ ಗಂಡ ಅಭಿಷೇಕ ನಿರಂತರವಾಗಿ ಪೀಡಿಸುತ್ತಿದ್ದ ಎನ್ನಲಾಗಿದ್ದು, ಇದೇ ಕಿರುಕುಳ ಈಗ ಆಕೆಯ ಪ್ರಾಣಕ್ಕೆ ಸಂಚಕಾರ ತಂದಿದೆ.
ಪದೇ ಪದೇ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು. ಅಲ್ಲದೇ ಗರ್ಭಿಣಿಯಾದಾಗಿನಿಂದ ಹೆಚ್ಚಾಗಿತ್ತು. ಚಿನ್ನ-ಹಣದ ಬೇಡಿಕೆ ಇಡುತ್ತಿದ್ದರು. ಸುಮಾರು 1 ಲಕ್ಷ ರೂಪಾಯಿ ಹಣ ನೀಡಿದ್ದೇವೆ. ಪಕ್ಕದಲ್ಲೇ ಪತಿ ಮಲಗಿದ್ದಾನೆ. ಆಕೆ ಸಾಯುವ ವರೆಗೂ ಆತನಿಗೆ ನಿದ್ದೆಯಿಂದ ಎಚ್ಚರವಾಗಿಲ್ಲವೆನ್ನುತ್ತಿದ್ದಾರೆ. ಗರ್ಭಿಣಿಯಾದರೂ ಆಕೆಗೆ ನಿತ್ಯ ಕಿರುಕುಳ ನೀಡುತ್ತಿದ್ದರು. ಅವರೇ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆಂದು ಮೃತಳ ಸಹೋದರರು ಆರೋಪಿಸಿದ್ದಾನೆ. ಬೈಟ್
ರಾತ್ರಿ ಫೋನ್ ಕರೆ ಮಾಡಿ ಹೃದಯಾಘಾತವಾಗಿದೆ ಎಂದು ಹೇಳಿದ್ದಾರೆ. ಬಂದು ನೋಡಿದಾಗ ಮಗಳು ಸಾವನ್ನಪ್ಪಿದ್ದು ಬೆಳಕಿಗೆ ಬಂದಿದೆ. ನನ್ನ ಮಗಳನ್ನು ಕೊಲೆ ಮಾಡಿದ್ದಾರೆಂದು ಮೃತಳ ತಾಯಿ ಆಕ್ರೋಶ ವ್ಯಕ್ತಪಡಿಸಿದರು. ನನ್ನ ಮಗಳು ನನಗೆ ಬೇಕು ಎಂದು ರೋಧಿಸಿದಳು.
ಮೃತ ದೀಪಾಳ ತಂದೆ-ತಾಯಿ ಮತ್ತು ಅಣ್ಣ ನೀಡಿದ ದೂರಿನನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ ಆರೋಪಿಗಳಾದ ಪತಿ ಅಭಿಷೇಕ ಮತ್ತು ಮಾವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗರ್ಭಿಣಿ ಮಹಿಳೆಯ ಮೇಲೆ ನಡೆದ ಈ ಕ್ರೌರ್ಯ ತಾಲೂಕಿನಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಾವಿನ ಹಿಂದಿನ ನಿಖರ ಕಾರಣಕ್ಕಾಗಿ ತನಿಖೆ ಮುಂದುವರಿಸಿದ್ದಾರೆ.
