Belagavi

ಬಸವೇಶ್ವರ ಸಹಕಾರಿ ಬ್ಯಾಂಕಿನ ನೂತನ ಉಪಾಧ್ಯಕ್ಷರಾಗಿ ಸಚಿನ್ ಶಿವಣ್ಣವರ ಅವಿರೋಧ ಆಯ್ಕೆ; ಮಾದರಿ ಬ್ಯಾಂಕ್ ನಿರ್ಮಾಣದ ಸಂಕಲ್ಪ!

Share

ಪ್ರಖ್ಯಾತ ಬಸವೇಶ್ವರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾಗಿದ್ದ ಸತೀಶ ಕೆ. ಪಾಟೀಲ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ನೂತನ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸುಸೂತ್ರವಾಗಿ ನೆರವೇರಿದೆ. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯನ್ವಯ ಬಸವೇಶ್ವರ ಬ್ಯಾಂಕಿನ ಆಡಳಿತ ಕಚೇರಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ, ಆಡಳಿತ ಮಂಡಳಿಯ ಉಳಿದ ಪದಾವಧಿಗಾಗಿ ಶ್ರೀ ಸಚಿನ್ ರಾಮಪ್ಪಾ ಶಿವಣ್ಣವರ ಅವರು ನೂತನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಸವೇಶ್ವರ ಸಹಕಾರಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ವಿಶಾಲಕುಮಾರ ಅಂಟಿನ ಅವರ ನೇತೃತ್ವದಲ್ಲಿ ಮಂಗಳವಾರ ಜರುಗಿದ ಆಡಳಿತ ಮಂಡಳಿಯ ಅಧಿಕೃತ ಸಭೆಯಲ್ಲಿ ಈ ಮಹತ್ವದ ಚುನಾವಣಾ ಪ್ರಕ್ರಿಯೆ ನಡೆದಿದ್ದು, ಸಚಿನ್ ಶಿವಣ್ಣವರ ಅವರು ಸರ್ವಸಮ್ಮತಿಯಿಂದ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ನೂತನವಾಗಿ ಆಯ್ಕೆಯಾದ ಸಚಿನ್ ಶಿವಣ್ಣವರ ಅವರಿಗೆ ಬ್ಯಾಂಕಿನ ಅಧ್ಯಕ್ಷರಾದ ರಮೇಶ ಕಳಸಣ್ಣವರ ಹಾಗೂ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಆತ್ಮೀಯವಾಗಿ ಅಭಿನಂದನೆ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ನೂತನ ಉಪಾಧ್ಯಕ್ಷರು, ಎಲ್ಲ ಸದಸ್ಯರ ಸಹಕಾರದೊಂದಿಗೆ ಸಂಸ್ಥೆಯ ಸರ್ವತೋಮುಖ ಏಳಿಗೆಗಾಗಿ ಪಾರದರ್ಶಕ ಆಡಳಿತ ನೀಡುವುದಾಗಿ ಭರವಸೆ ನೀಡಿದರು. ನಂತರ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ರಮೇಶ ಕಳಸಣ್ಣವರ ಅವರು, ನೂತನ ಉಪಾಧ್ಯಕ್ಷರಿಗೆ ಜವಾಬ್ದಾರಿಗಳ ಬಗ್ಗೆ ತಿಳಿಸುತ್ತಾ, ಮುಂಬರುವ ದಿನಗಳಲ್ಲಿ ಡಿಜಿಟಲೈಜೇಶನ್ ಹಾಗೂ ವಿವಿಧ ಸಮಾಜಮುಖಿ ಯೋಜನೆಗಳ ಮೂಲಕ ಬಸವೇಶ್ವರ ಸಹಕಾರಿ ಬ್ಯಾಂಕನ್ನು ರಾಜ್ಯದಲ್ಲೇ ಒಂದು ಅತ್ಯುತ್ತಮ ಮಾದರಿ ಸಹಕಾರಿ ಬ್ಯಾಂಕ್ ಆಗಿ ನಿರ್ಮಿಸುವ ದೃಢ ಸಂಕಲ್ಪವನ್ನು ವ್ಯಕ್ತಪಡಿಸಿದರು

Tags:

error: Content is protected !!