MAHARASHTRA

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಗಡಿ ವಿವಾದದ ಸದ್ದು:

Share

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಕಿಚ್ಚು ಈಗ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿದೆ. ಇಸ್ಲಾಂಪುರದ ಶಾಸಕ ಜಯಂತ್ ಪಾಟೀಲ್ ಅವರು ಗಡಿ ಭಾಗದ ಮರಾಠಿಗರ ಹಿತರಕ್ಷಣೆ ಮತ್ತು ಕಾನೂನು ಹೋರಾಟದ ಕುರಿತು ಸರ್ಕಾರದ ಗಮನ ಸೆಳೆದಿದ್ದು, ಕೇವಲ ಸಭಾಗೃಹದ ಚರ್ಚೆಯಿಂದ ಪ್ರಯೋಜನವಿಲ್ಲ ಎಂದು ಗುಡುಗಿದ್ದಾರೆ.”

ಮಹಾರಾಷ್ಟ್ರ ವಿಧಾನಸಭೆಯ ಕಲಾಪದಲ್ಲಿ ಇಂದು ಗಡಿ ವಿವಾದದ ಕುರಿತು ವಿಷಯ ಪ್ರಸ್ತಾಪಿಸಿದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜಯಂತ್ ಪಾಟೀಲ್, ರಾಜ್ಯ ಸರ್ಕಾರದ ಮಂದಗತಿಯ ಧೋರಣೆಯನ್ನು ಟೀಕಿಸಿದರು. “ಪ್ರತಿವರ್ಷ ವಿಧಾನಸಭೆಯಲ್ಲಿ ಗಡಿ ವಿವಾದದ ಕುರಿತು ಕೇವಲ ಚರ್ಚೆಗಳು ನಡೆಯುತ್ತಿವೆಯೇ ಹೊರತು, ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ತಾರ್ಕಿಕ ಅಂತ್ಯಕ್ಕೆ ಗಂಭೀರ ಪ್ರಯತ್ನಗಳು ನಡೆಯುತ್ತಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಗಡಿ ವಿವಾದದ ಕಾನೂನು ಹೋರಾಟವನ್ನು ಬಲಪಡಿಸಲು ಮಹಾರಾಷ್ಟ್ರ ಸರ್ಕಾರವು ಕೂಡಲೇ ವಿಶೇಷ ನ್ಯಾಯವಾದಿಯನ್ನು ನೇಮಕ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಗಡಿಭಾಗದ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಶೀಘ್ರವಾಗಿ ನಡೆಯುವಂತೆ ಸರ್ಕಾರವು ನ್ಯಾಯಾಂಗ ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಪಾಟೀಲ್ ಮನವಿ ಮಾಡಿದರು. ವಿಶೇಷವಾಗಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಗಡಿಭಾಗದ ಸಮಸ್ಯೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ, ಅಲ್ಲಿನ ಜನರ ಹಿತರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು. ಕರ್ನಾಟಕದ ಗಡಿಭಾಗದಲ್ಲಿರುವ ಮರಾಠಿ ಭಾಷಿಕರ ಹಿತಾಸಕ್ತಿ ಕಾಪಾಡುವುದು ಮಹಾರಾಷ್ಟ್ರ ಸರ್ಕಾರದ ಜವಾಬ್ದಾರಿ ಎಂದು ಅವರು ಈ ಸಂದರ್ಭದಲ್ಲಿ ನೆನಪಿಸಿದರು.

Tags:

error: Content is protected !!