ರಾಜ್ಯ ಸರ್ಕಾರ ಸಾವಿರ ದಿನ ಪೂರೈಸಿದ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೋಡಿ ವಿರೋಧ ಪಕ್ಷಗಳ ವಿರುದ್ಧ ಕೆಂಡಕಾರಿದ್ದಾರೆ. ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸುವ ಮೂಲಕ ‘ಭೂ ಗ್ಯಾರಂಟಿ’ ಸಮರ್ಪಿಸಿದ ಸಿಎಂ, “ಖಜಾನೆ ಖಾಲಿಯಾಗಿದೆ ಎನ್ನುವ ಬಿಜೆಪಿಯವರ ಆರೋಪ ಶುದ್ಧ ಸುಳ್ಳು” ಎಂದು ಗುಡುಗಿದ್ದಾರೆ.


ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1 ಸಾವಿರ ದಿನಗಳು ಕಳೆದಿವೆ. ಹೀಗಾಗಿ ಹಾವೇರಿಯಲ್ಲಿ ಇಂದು ಕಾಂಗ್ರೆಸ್ ಭೂ ಗ್ಯಾರಂಟಿ ಸಮರ್ಪಣಾ ಹೆಸರಿನಲ್ಲಿ ಸಾಧನಾ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರಗಳನ್ನ ಸಿಎಂ ಸಿದ್ದರಾಮಯ್ಯ ವಿತರಣೆ ಮಾಡಿದರು. ಆದರೆ ಇದೇ ಸಮಾವೇಶ ‘ದೋಸ್ತಿ’ಗಳ ವಾಕ್ಸಮರಕ್ಕೆ ವೇದಿಕೆ ಆಗಿತ್ತು.


ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಗ್ಯಾರಂಟಿಗಳನ್ನ ಯಾರು ವಿರೋಧ ಮಾಡ್ತಿದ್ರೋ, ಇಂದು ಅವರೇ ನಮ್ಮ ಗ್ಯಾರಂಟಿಗಳನ್ನ ಅನುಸರಿಸ್ತಿದ್ದಾರೆ. ಜನಸೇವೆಯ ಸಾರ್ಥಕ ಆಡಳಿತವನ್ನು ರಾಜ್ಯ ಸರ್ಕಾರ ನೀಡಿದೆ. 2 ವರ್ಷ 9 ತಿಂಗಳಲ್ಲಿ ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿದ್ದೇವೆ. ಈಗಾಗಲೇ 243 ಭರವಸೆಗಳನ್ನು ಈಡೇರಿಸಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆ ಈಡೇರಿಸುತ್ತೇವೆ. ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಗುಡುಗಿದರು. ಬಿಜೆಪಿ ಅವಧಿಯಲ್ಲಿ ಶೇ.10ರಷ್ಟು ಭರವಸೆಯನ್ನೂ ಈಡೇರಿಸಿಲ್ಲ. ಇದೀಗ ರಾಜ್ಯ ಸರ್ಕಾರದ ಬಳಿ ಹಣವಿಲ್ಲವೆಂದು ಟೀಕೆ ಮಾಡುತ್ತಾರೆ. ಖಜಾನೆ ಖಾಲಿಯಾಗಿದೆ ಅಂತಾ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾವು 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಗ್ಯಾರಂಟಿಗೆ 1.18 ಲಕ್ಷ ಕೋಟಿ ರೂ. ಹಣವನ್ನು ಖರ್ಚು ಮಾಡಿದ್ದೇವೆ. ಖಜಾನೆ ಖಾಲಿಯಾಗಿದ್ದರೆ ಇಷ್ಟು ಹಣ ಖರ್ಚು ಮಾಡಲು ಆಗುತ್ತಿರಲಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶೀವಕುಮಾರ್ಬಿಜೆಪಿ, ಜೆಡಿಎಸ್ನವರು ಜನರಿಗಾಗಿ ಒಂದು ಕಾರ್ಯಕ್ರಮ ಕೊಟ್ಟಿದ್ದಾರಾ ಅಂತ ಆಕ್ರೋಶಭರಿತವಾಗಿ ಪ್ರಶ್ನಿಸಿದರು. ಬಿಜೆಪಿ ನಾಯಕರ ಟೀಕೆ, ಟಿಪ್ಪಣಿಗಳ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ನಾವೇನು ಮಾಡೋಕೆ ಆಗಲಿಲ್ಲ ಅಂತ ಈಗ ಕೈಕೈ ಹಿಸುಕಿಕೊಳ್ತಿದ್ದಾರೆ ಅಂತ ಗರಂ ಆದರು. ನಮ್ಮ ಸರ್ಕಾರಕ್ಕೆ 1 ಸಾವಿರ ದಿನಗಳಾಗಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ದೊಡ್ಡ ಬದಲಾವಣೆಯಾಗಿದೆ. 5 ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಆಗಲಿಲ್ಲ. ಇದು ಇದೀಗ ದೇಶದ ಗ್ಯಾರಂಟಿಯಾಗಿದೆ. ಗ್ಯಾರಂಟಿ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಾವಿಲ್ಲ, ಆದರೆ ಟೀಕೆ ಹಾಗೂ ಅಪಪ್ರಚಾರಕ್ಕೆ ಸಾವಿದೆ ಎಂದು ಹೇಳಿದ್ದಾರೆ.

