ಕುಮಾರಸ್ವಾಮಿ ಕುಟುಂಬವೇ ವಸೂಲಿಗಿಳಿದಿತ್ತು: ಯತೀಂದ್ರ

ಸಿಎಂ ಪುತ್ರನಿಂದ ಹೆಚ್‌ಡಿಕೆಗೆ ಭರ್ಜರಿ ತಿರುಗೇಟು
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ
ತಂದೆ ಸಿಎಂ ಇರುವವರೆಗೂ ಸಚಿವನಾಗಲ್ಲ
ರಾಜ್ಯ ರಾಜಕೀಯದಲ್ಲಿ ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವಿನ ವಾಗ್ಯುದ್ಧ ತಾರಕಕ್ಕೇರಿದೆ. ತಮ್ಮ ವಿರುದ್ಧ ಕೇಳಿಬಂದ ವಸೂಲಿ ಆರೋಪಕ್ಕೆ ಮೈಸೂರಿನಲ್ಲಿ ಭರ್ಜರಿ ತಿರುಗೇಟು ನೀಡಿದ ಯತೀಂದ್ರ, ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಅವರ ಮನೆಯವರೆಲ್ಲಾ ವಸೂಲಿಗೆ ನಿಂತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ವಿರುದ್ಧದ ‘ವಸೂಲಿ’ ಆರೋಪಕ್ಕೆ ಕಿಡಿಕಾರಿದ ಡಾ. ಯತೀಂದ್ರ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರ ಬಳಿ ಯಾವುದೇ ದಾಖಲೆಗಳಿಲ್ಲ, ಹೀಗಾಗಿ ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ. ಅವರು ಸಿಎಂ ಆಗಿದ್ದ ಕಾಲದಲ್ಲಿ ಅವರ ಇಡೀ ಕುಟುಂಬವೇ ವಸೂಲಿಗಿಳಿದಿತ್ತು ಎಂದು ನಾನು ಕೂಡ ಹೇಳಬಲ್ಲೆ ಎಂದು ಆಕ್ರೋಶ ಹೊರಹಾಕಿದರು. ಸಿದ್ದರಾಮಯ್ಯ ಅವರು ಕಣ್ಣೀರು ಹಾಕಿದ್ದಾರೆ ಎಂಬ ಹೆಚ್‌ಡಿಕೆ ಹೇಳಿಕೆಯನ್ನು ವ್ಯಂಗ್ಯವಾಡಿದ ಅವರು, “ನಮ್ಮ ತಂದೆ ರಾಜಕಾರಣದಲ್ಲಿ ಹತ್ತಾರು ಸೋಲು-ಗೆಲುವು ಕಂಡವರು, ಅವರಿಗೆ ಕಣ್ಣೀರು ಹಾಕುವ ಅವಶ್ಯಕತೆಯಿಲ್ಲ” ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಸಚಿವ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿ, ತಂದೆ ಸಿಎಂ ಆಗಿರುವವರೆಗೂ ತಾವು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಹೈಕಮಾಂಡ್ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಇನ್ನು ಮುಂಬರುವ ಉಪ ಚುನಾವಣೆಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಯತೀಂದ್ರ, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದರು. “ನನಗೆ ಬಾಗಲಕೋಟೆ ಉಸ್ತುವಾರಿ ನೀಡಲಾಗಿತ್ತು, ಅಲ್ಲಿ ಭರ್ಜರಿ ಪ್ರಚಾರ ಮಾಡಿದ್ದೇನೆ. ದಾವಣಗೆರೆಯಲ್ಲಿ ಸ್ಥಳೀಯವಾಗಿ ಏನಾಗಿದೆ ಎಂಬುದು ಗೊತ್ತಿಲ್ಲದಿದ್ದರೂ, ಎರಡೂ ಕಡೆ ನಮ್ಮ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ” ಎಂದರು. ಕುಟುಂಬ ರಾಜಕಾರಣದ ಟೀಕೆಗಳಿಗೆ ಉತ್ತರಿಸಿದ ಅವರು, ಎರಡೂ ಕಡೆ ಅರ್ಹರಿಗೆ ಮತ್ತು ಅವರವರ ಕುಟುಂಬಕ್ಕೆ ಟಿಕೆಟ್ ನೀಡಲಾಗಿದ್ದು, ಇದು ಪಕ್ಷದ ಗೆಲುವಿಗೆ ಪೂರಕವಾಗಲಿದೆ ಎಂದು ಮೈಸೂರಿನಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
