• ಹಲ್ಮಿಡಿ ಶಾಸನ ಮರುಸ್ಥಾಪನೆಗೆ ಸಲಹೆ
• ಡಿಸಿ ಕಚೇರಿ ಆವರಣದಲ್ಲಿ ಸ್ಥಳ ಪರಿಶೀಲನೆ
• ಮೇಲ್ಸೇತುವೆ ಕಾಮಗಾರಿ ಹಿನ್ನೆಲೆ ಮರುಚಿಂತನೆ
• ಕನ್ನಡ ಸಂಘಟನೆಗಳಿಂದ ಅಧಿಕಾರಿಗಳಿಗೆ ಮನವಿ

ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಆವರಣದೊಳಗೆ ಸೂಕ್ತ ಸ್ಥಳದಲ್ಲಿ ಮರು ಸ್ಥಾಪಿಸುವಂತೆ ಕನ್ನಡ ಸಂಘಟನೆಗಳ ಮುಖಂಡರು ಶುಕ್ರವಾರ ಮುಂಜಾನೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸಲಹೆ ನೀಡಿದರು.
ಸದ್ಯ ಮುಖ್ಯ ದ್ವಾರದ ಬಳಿ ಕೂಡಿಸಲು ಸಿದ್ಧತೆ ಮಾಡಲಾಗಿದೆ. ಈ ಸ್ಥಳವು ಜಿಲ್ಲಾಧಿಕಾರಿ ಮುಂದಿನ ಮುಖ್ಯ ರಸ್ತೆಗೆ ಹೊಂದಿಕೊಂಡಿದೆ. ಶೀಘ್ರವೇ ರಸ್ತೆ ಮೇಲಸೇತುವೆ ನಿರ್ಮಾಣ ಕಾರ್ಯ ಆರಂಭವಾಗಲಿದ್ದು ಮತ್ತೆ ಹಲ್ಮಿಡಿ ಶಾಸನದ ಸ್ಥಳಾಂತರ ಮಾಡಬಹುದಾಗಿದೆ.
ಈ ಹಿನ್ನೆಲೆಯಲ್ಲಿ ಹೊಸ ಧ್ವಜದ ಕಟ್ಟೆಯ ಸಮೀಪವೇ ತಳ ಕಟ್ಟೆಯನ್ನು ಸುಂದರವಾಗಿ ನಿರ್ಮಿಸಿ, ಸುತ್ತಲೂ ಸರಪಳಿ ಹಾಕಿ ಹಲ್ಮಿಡಿ ಶಾಸನವನ್ನು ಪೂರ್ವಭಿಮುಖವಾಗಿ ಕೂಡಿಸುವಂತೆ ತಿಳಿಸಲಾಯಿತು.
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳೂಕರ ಹಾಗೂ ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ ಮುಂತಾದವರು ಉಪಸ್ಥಿತರಿದ್ದರು.
