ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಸದ್ದು ದಿನಕ್ಕೊಂದು ತಿರುವು ಪಡೆಯುತ್ತಿದೆ. ಡಿ.ಕೆ. ಶಿವಕುಮಾರ್ ಪರ ಬ್ಯಾಟ್ ಬೀಸಿದ ಶಾಸಕರ ವಿರುದ್ಧ ಈಗ ಗೃಹ ಸಚಿವ ಜಿ. ಪರಮೇಶ್ವರ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಹೈಕಮಾಂಡ್ ಸೂಚನೆಯನ್ನೂ ಮೀರಿ ಮಾತನಾಡುತ್ತಿರುವ ನಾಯಕರ ವಿರುದ್ಧ ಪರಮೇಶ್ವರ್ ಈಗ ದೂರು ನೀಡಲು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್, ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆಯ ಚರ್ಚೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅದರಲ್ಲೂ ವಿಶೇಷವಾಗಿ ಡಿ.ಕೆ. ಶಿವಕುಮಾರ್ ಪರವಾಗಿ ಹೇಳಿಕೆ ನೀಡಿದ್ದ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ವಿರುದ್ಧ ಕಿಡಿಕಾರಿದ ಅವರು, “ಹೈಕಮಾಂಡ್ ಈಗಾಗಲೇ ಬಾಯಿ ಮುಚ್ಚಿಕೊಂಡು ಸುಮ್ಮನಿರಿ ಎಂದು ಖಡಕ್ ಸೂಚನೆ ನೀಡಿದೆ. ಹೀಗಿದ್ದರೂ ಶಾಸಕರು ಮತ್ತು ಮುಖಂಡರು ಪದೇ ಪದೇ ಈ ಬಗ್ಗೆ ಮಾತನಾಡುವುದು ಸರಿಯಲ್ಲ” ಎಂದು ಎಚ್ಚರಿಕೆ ನೀಡಿದರು. ಪದೇ ಪದೇ ಸಿಎಂ ಕುರ್ಚಿ ಬಗ್ಗೆ ಚರ್ಚೆ ಮಾಡುವ ಬದಲು ಆಡಳಿತದ ಕಡೆ ಗಮನ ಹರಿಸುವುದು ಎಲ್ಲರಿಗೂ ಒಳ್ಳೆಯದು ಎಂದು ಪರಮೇಶ್ವರ್ ಸಲಹೆ ನೀಡಿದರು. ಶಿಸ್ತು ಉಲ್ಲಂಘಿಸಿ ಹೇಳಿಕೆ ನೀಡುತ್ತಿರುವವರ ಬಗ್ಗೆ ನಾನು ಕೂಡ ಹೈಕಮಾಂಡ್ ಜೊತೆ ಮಾತನಾಡುತ್ತೇನೆ ಎಂದು ಹೇಳುವ ಮೂಲಕ, ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ಹಿರಿಯ ನಾಯಕರಿಗೆ ದೂರು ನೀಡುವ ಮುನ್ಸೂಚನೆ ನೀಡಿದರು. ಈ ಹೇಳಿಕೆಯು ಕೈ ಪಾಳಯದಲ್ಲಿ ನಾಯಕತ್ವದ ಸಂಘರ್ಷ ಮತ್ತಷ್ಟು ತಾರಕಕ್ಕೇರಿರುವುದನ್ನು ಸಾಬೀತುಪಡಿಸಿದೆ.
