• ಖಾನಾಪುರದಲ್ಲಿ ಹೊರಗುತ್ತಿಗೆ ನೌಕರರ ಪ್ರತಿಭಟನೆ
• ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಬಿಸಿಮುಟ್ಟಿಸಿದ ನೌಕರರು
• ಸೇವಾ ಭದ್ರತೆಗಾಗಿ ನೌಕರರ ಸಂಘದಿಂದ ಆಗ್ರಹ
• ಬೇಡಿಕೆ ಈಡೇರದಿದ್ದರೆ ಹೋರಾಟದ ಎಚ್ಚರಿಕೆ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರು ಇಂದು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸೇವಾ ಭದ್ರತೆ ಹಾಗೂ ವೇತನ ವಿಳಂಬದ ವಿರುದ್ಧ ನೌಕರರು ಈ ವೇಳೆ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಇಂದು ಖಾನಾಪುರ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ, ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರಿಗೆ ಬರೆದ ಮನವಿಯನ್ನು ಹಸ್ತಾಂತರಿಸಿದರು. ಕಳೆದ ಎರಡು ದಶಕಗಳಿಂದ ಅಡುಗೆಯವರು, ಸ್ವಚ್ಛತಾಗಾರರು ಮತ್ತು ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರೂ, ತಮಗೆ ಇನ್ನೂ ಕನಿಷ್ಠ ವೇತನ ಮತ್ತು ಸೇವಾ ಭದ್ರತೆ ಸಿಕ್ಕಿಲ್ಲ ಎಂದು ನೌಕರರು ಅಳಲು ತೋಡಿಕೊಂಡರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮುಖಂಡರು, ರಜಾ ಅವಧಿಯಲ್ಲೂ ವೇತನ ನೀಡಬೇಕು ಮತ್ತು ಕೆಲಸದಿಂದ ನೌಕರರನ್ನು ವಜಾ ಮಾಡಬಾರದು ಎಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ಪ್ರದೀಪ ದಳವಾಯಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾಂಬಳೆ ಅವರ ನೇತೃತ್ವದಲ್ಲಿ ನಡೆದ ಈ ಮನವಿ ಸಲ್ಲಿಕೆ ಕಾರ್ಯಕ್ರಮದಲ್ಲಿ ಶ್ರೀಕಾಂತ ಸಣ್ಣಕ್ಕಿ, ಮಲ್ಲಪ್ಪಾ ಬಾತಮಾರೆ, ಮುಬಾರಕ ನದಾಫ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಸರ್ಕಾರ ಕೂಡಲೇ ಸ್ಪಂದಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಅವರು ಎಚ್ಚರಿಸಿದರು.
