MAHARASHTRA

ಚೋರ್ಲಾ ಘಾಟ್ 400 ಕೋಟಿ ದರೋಡೆ ಪ್ರಕರಣ: ಬೆಳಗಾವಿ ಪೊಲೀಸರಿಗೆ ದೂರು ನೀಡಲು ಸಂದೀಪ್ ಪಾಟೀಲ್ ಸಿದ್ಧ

Share

ಅಕ್ಟೋಬರ್ 2025 ರಲ್ಲಿ ಚೋರ್ಲಾ ಘಾಟ್‌ನಲ್ಲಿ ನಡೆದ 400 ಕೋಟಿ ರೂಪಾಯಿ ಹಳೆಯ 2 ಸಾವಿರ ಮುಖಬೆಲೆಯ ನೋಟುಗಳಿದ್ದ ಎರಡು ಕಂಟೈನರ್‌ಗಳ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ಕೈಗೆತ್ತಿಕೊಳ್ಳಲು ಬೆಳಗಾವಿ ಪೊಲೀಸರು ನೀಡಿದ್ದ ದೂರು ದಾಖಲಿಸುವ ಕರೆಗೆ ಸ್ಪಂದಿಸಿರುವ ಸಂದೀಪ್ ಪಾಟೀಲ್, ತಾವು ದೂರು ನೀಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಕರ್ನಾಟಕ ಪೊಲೀಸರು ಈ ಪ್ರಕರಣವನ್ನು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಿ ಸತ್ಯವನ್ನು ಹೊರತರಬೇಕು ಎಂದು ಈ ಪ್ರಕರಣದಲ್ಲಿ ಅಪಹರಣಕ್ಕೊಳಗಾಗಿ ಬಿಡುಗಡೆಯಾದ ಸಂದೀಪ್ ಪಾಟೀಲ್ ವಿನಂತಿಸಿದ್ದಾರೆ.

ಕರ್ನಾಟಕ-ಗೋವಾ ಗಡಿಯ ಚೋರ್ಲಾ ಘಾಟ್‌ನಲ್ಲಿ ನಡೆದ 400 ಕೋಟಿ ದರೋಡೆಗೆ ಸಂಬಂಧಿಸಿದಂತೆ ಅವರು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಪತ್ರಕರ್ತರಾದ ಶ್ರೀಕಾಂತ್ ಕಾಕತೀಕರ್ (ಬೆಳಗಾವಿ) ಮತ್ತು ಭರತ್ ಗೋಸಾವಿ (ನಾಸಿಕ್) ಅವರೊಂದಿಗೆ ಮಾತನಾಡುತ್ತಿದ್ದರು. “ನನ್ನ ಅಪಹರಣಕ್ಕೆ ಸಂಬಂಧಿಸಿದಂತೆ ನಾನು ನೀಡಿದ ದೂರಿನ ಮೇರೆಗೆ ನಾಸಿಕ್ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಅದೇ ರೀತಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಚೋರ್ಲಾ ಘಾಟ್ ದರೋಡೆಗೆ ಸಂಬಂಧಿಸಿದಂತೆ ಯಾರಾದರೂ ದೂರು ನೀಡಿದರೆ ನಾವು ಕೇಸ್ ದಾಖಲಿಸಿಕೊಳ್ಳುತ್ತೇವೆ ಎಂದು ಕರೆ ನೀಡಿದ್ದರೆ, ನಾನು ಅವರ ಬಳಿ ದೂರು ನೀಡಲು ಸಿದ್ಧನಿದ್ದೇನೆ. ಕರ್ನಾಟಕ ಪೊಲೀಸರು ಕೂಡ ಈ ಪ್ರಕರಣದ ತನಿಖೆ ನಡೆಸುವುದಾದರೆ ನಾನು ದೂರು ಸಲ್ಲಿಸುತ್ತೇನೆ” ಎಂದು ಅವರು ಹೇಳಿದರು.

ಕರ್ನಾಟಕದಿಂದ ಚೋರ್ಲಾ-ಗೋವಾ ಮಾರ್ಗವಾಗಿ ಬಾಲಾಜಿ ಟ್ರಸ್ಟ್‌ಗೆ ಹೋಗುತ್ತಿದ್ದ 400 ಕೋಟಿ ರೂಪಾಯಿಗಳ ಲೂಟಿಯು ಕರ್ನಾಟಕದ ವ್ಯಾಪ್ತಿಯಲ್ಲೇ ನಡೆದಿದೆ ಎಂದು ಜಯೇಶ್ ಕದಂ ನನಗೆ ತಿಳಿಸಿದ್ದಾರೆ. ಆದ್ದರಿಂದ ಕರ್ನಾಟಕ ಪೊಲೀಸರು ಈ ಪ್ರಕರಣದ ತನಿಖೆಯನ್ನು ಸರಿಯಾದ ದಿಕ್ಕಿನಲ್ಲಿ ನಡೆಸಿ ಸಂಪೂರ್ಣ ಸತ್ಯವನ್ನು ಬಯಲಿಗೆಳೆಯಬೇಕು ಎಂದು ಸಂದೀಪ್ ಪಾಟೀಲ್ ಆಗ್ರಹಿಸಿದರು. ಜಯೇಶ್ ಕದಂ ನೀಡಿದ ಮಾಹಿತಿಯಂತೆ, ದರೋಡೆ ನಡೆದ ಕೆಲವು ದಿನಗಳ ನಂತರ ಕಿಶೋರ್ ಸಾವ್ಲಾ ಅವರಿಗೆ ಅರಿಜಿತ್ ಸೂಚನೆಯಂತೆ ವಿರಾಟ್ ಗಾಂಧಿ ಈ ‘ಗೇಮ್’ (ಸಂಚು) ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಕಿಶೋರ್ ಸಾವ್ಲಾ ಅವರು ಅರಿಜಿತ್‌ನನ್ನು ಮಾದಕ ವಸ್ತು ಸಾಗಣೆಯ ಸುಳ್ಳು ಪ್ರಕರಣದಲ್ಲಿ ದುಬೈನಲ್ಲಿ ಸಿಲುಕಿಸಿದ್ದಾರೆ ಎಂದು ಖುದ್ದು ಜಯೇಶ್ ಕದಂ ಬಹಿರಂಗಪಡಿಸಿದ್ದಾರೆ ಎಂದು ಸಂದೀಪ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಈ ನಡುವೆ, 400 ಕೋಟಿ ದರೋಡೆ ಪ್ರಕರಣದ ತಂತಿಗಳು ಗುಜರಾತ್‌ವರೆಗೆ ಹಬ್ಬಿದ್ದು, ಅಲ್ಲಿನ ಆಶ್ರಮವೊಂದರಿಂದ ಈ ಹಣವನ್ನು ತಿರುಪತಿಗೆ ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಹಳೆಯ 2 ಸಾವಿರ ರೂಪಾಯಿ ನೋಟುಗಳನ್ನು ಬದಲಾಯಿಸಿ ಹೊಸ ಕರೆನ್ಸಿಯನ್ನು ಪಡೆಯುವ ಪ್ರಯತ್ನ ಇದಾಗಿತ್ತು. ಈ ಪ್ರಕರಣದಲ್ಲಿ ವಿರಾಟ್ ಗಾಂಧಿ, ವಿಶಾಲ್ ನಾಯ್ಡು, ಜಯೇಶ್ ಕದಂ, ಸುನಿಲ್ ಧುಮಾಲ್ ಮುಂತಾದ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಅಕ್ಟೋಬರ್ 16, 2025 ರಂದು ರಾತ್ರಿ ಚೋರ್ಲಾ ಘಾಟ್‌ನಲ್ಲಿ ಹಳೆಯ ನೋಟುಗಳಿಂದ ತುಂಬಿದ್ದ ಎರಡು ಕಂಟೈನರ್‌ಗಳು ನಾಪತ್ತೆಯಾಗಿವೆ ಎಂಬ ದೂರು ಕೇಳಿಬಂದಿದೆ.

ಕಿಶೋರ್ ಸಾವ್ಲಾ ಎಂಬ ಹೆಸರಿನ ಬಗ್ಗೆಯೂ ಹೆಚ್ಚಿನ ಚರ್ಚೆ ನಡೆಯುತ್ತಿದ್ದು, ವಿರಾಟ್ ಗೆಳೆಯ ಸೈಯದ್ ಅಜರ್ ಮತ್ತು ದುಬೈನಲ್ಲಿದ್ದ ಅರಿಜಿತ್ ಕಂಟೈನರ್ ಮೂಲಕ ನೋಟುಗಳನ್ನು ಕಳುಹಿಸಲು ಸಹಾಯ ಮಾಡಿದ್ದರು ಎಂದು ತಿಳಿದುಬಂದಿದೆ. ಗುಜರಾತ್ ಗಡಿಯ ಸಿಲ್ವಾಸಾದಿಂದ ಈ ಹಣವನ್ನು ತಿರುಪತಿಗೆ ಕೊಂಡೊಯ್ಯಲಾಗುತ್ತಿತ್ತು.

Tags:

error: Content is protected !!