ಸೇವಾ ಭದ್ರತೆ ನೀಡಬೇಕೆಂದು ಆಗ್ರಹಿಸಿ ಇಂದು ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ಶುಕ್ರವಾರದಂದು ಬೆಳಗಾವಿ ಜಿಲ್ಲಾಧಿಕಾರಿ ಕಾರ್ಯಾಲಯದ ಎದುರು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಸೇವಾ ಭದ್ರತೆ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿತಿಂಗಳು 5ನೇ ತಾರೀಖು ಸಂಬಳ ನೀಡಬೇಕು ಮತ್ತು ಬಾಕಿ ವೇತನವನ್ನು ಪಾವತಿಸಬೇಕು. ನಿವೃತ್ತಿ ನಂತರ ಜೀವನ ನಿರ್ವಹಣೆಗೆ 10 ಲಕ್ಷ ಪರಿಹಾರ ನೀಡಬೇಕು. ಅಡುಗೆ ಕೋಣೆಯಲ್ಲಿ ಸುರಕ್ಷಾ ಸಲಕರಣೆಗಳನ್ನು ಒದಗಿಸಬೇಕು. ಇಲಾಖೆಯಿಂದ ನೇರವಾಗಿ ಸಂಬಳವನ್ನು ನೀಡಬೇಕು. ನಿವೃತ್ತಿ ವಯೋಮಾನದ ವರೆಗೂ ವೃತ್ತಿಯಲ್ಲಿ ಮುಂದುವರೆಸಬೇಕು. ವಾರದ ರಜೆ ನೀಡಬೇಕು. ಕಾರ್ಮಿಕ ಇಲಾಖೆಯ ನಿಯಮದ ಪ್ರಕಾರ ಕನಿಷ್ಟ 31 ಸಾವಿರ ರೂಪಾಯಿ ವೇತನವನ್ನು ನೀಡಬೇಕು ಸೇರಿದಂತೆ ವಿವಿಧ 21 ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಬೆಂಗಳೂರು, ಜಿಲ್ಲಾ ಸಮಿತಿ ಬೆಳಗಾವಿಯ ಜಿಲ್ಲಾಧ್ಯಕ್ಷ ಪ್ರದೀಪ ದಳವಾಯಿ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಲಕ್ಕಪ್ಪ ಕಾಂಬಳೆ, ಶ್ರೀಕಾಂತ ಸಣ್ಣಕ್ಕಿ, ಲಗಮಣ್ಣಾ ಸರ್ಜನ್, ರಮೇಶ್ ಪಾಟೀಲ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.