Agriculture

ಆಧುನಿಕ ಕೃಷಿಗೆ ವರದಾನವಾದ ಡ್ರೋಣ್…

Share

ಎಲ್ಲ ಕ್ಷೇತ್ರದಲ್ಲೂ ಆಧುನಿಕತೆ ಹೊಸ ಇತಿಹಾಸವನ್ನು ನಿರ್ಮಿಸುತ್ತಿದೆ. ಅಂತೆಯೇ ಕೃಷಿ ಕ್ಷೇತ್ರದಲ್ಲೂ ಅನೇಕ ಬದಲಾವಣೆಗಳು ಕಾಣಸಿಗುತ್ತಿವೆ. ಈಗ ಮತ್ತೊಂದು ಬದಲಾವಣೆಗೆ ಬೆಳಗಾವಿಯ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವರು ಭಾಷ್ಯ ಬರೆದಿದ್ದಾರೆ. 4-5 ಗಂಟೆಗಳ ಕಾಲ ಮಾಡಬೇಕಿದ್ದ ರೈತನ ಕೆಲಸವನ್ನು ಕೇವಲ 7 ರಿಂದ 8 ನಿಮಿಷ ಎಕರೆಗೆ ಮಾಡುವ ಹೊಸ ತಂತ್ರಜ್ಞಾನವೊಂದು ಈದೀಗ ಲಗ್ಗೆ ಇಟ್ಟಿದೆ. ಏನಿದು ತಂತ್ರಜ್ಞಾನ ಬನ್ನಿ ನೋಡೋಣ.

ಬೆಳೆ ಬೆಳೆದ ಮೇಲೆ ರೈತ ಅದು ಕೈಗೆ ಬರುವವರೆಗೂ ಪ್ರತಿದಿನ ಕಷ್ಟಪಡುತ್ತಾನೆ. ದಿನಪೂರ್ತಿ ಕೆಲಸ ಮಾಡಿದರೂ ಸಾಲದು. ಜೊತೆಗೆ ಹಣ ಕೂಡ ವ್ಯಯ ಮಾಡಬೇಕಾಗುತ್ತದೆ. ಆದರೇ ಈದೀಗ ಬೆಳೆಗಳು ಸಮೃದ್ಧವಾಗಿ ಬೆಳೆಯಲು ಪೋಷಕಾಂಶಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ನೀಡುವ ಉಪಕ್ರಮವೊಂದು ಆರಂಭಗೊಂಡಿದೆ. ಡ್ರೋಣ ಮೂಲಕ ರೈತನ ಬೆಳೆಗಳಿಗೆ ಪೋಷಕಾಂಶ ಮತ್ತು ಕೀಟನಾಶಕಗಳನ್ನು ಸಿಂಪಡಿಸುವ ಹೊಸ ಉಪಕ್ರಮ ಆರಂಭಗೊಂಡಿದೆ. ಯಮಕನಮರ್ಡಿ ಕ್ಷೇತ್ರದಲ್ಲಿ ಇಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಈ ಉಪಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಿದರು.

ಕೃಷಿ ಕ್ಷೇತ್ರದಲ್ಲಿ ಆಧುನೀಕ ತಂತ್ರಜ್ಞಾನದ ಬಳಕೆ ಮಾಡುವುದರಿಂದ ರೈತ ಹೆಚ್ಚು ಇಳುವರಿ ಪಡೆಯಬಹುದಾಗಿದೆ. ಕಾಲಕ್ಕೆ ತಕ್ಕಂತೆ ರೈತರು ತಂತ್ರಜ್ಞಾನದ ಬಳಕೆ ಮಾಡಬೇಕು. ಕೃಷಿ ಇಲಾಖೆ ಮತ್ತು ರೋಟರಿ ಕ್ಲಬ್ ಆಫ್ ಬೆಲಗಾಮ್ ನ ವತಿಯಿಂದ ಆರಂಭಿಸಿದ ಉಪಕ್ರಮ ರೈತರ ಕೃಷಿಗೆ ವರದಾನವಾಗಿದೆ. ಪೋಷಕಾಂಶ ಮತ್ತು ಕೀಟನಾಶಕ ಸಿಂಪಡಣೆಗಾಗಿ ಹೊಸ ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳಬೇಕೆಂದು ಸಚಿವ ಸತೀಶ ಜಾರಕಿಹೊಳಿ ಕರೆ ನೀಡಿದರು.

ಎತ್ತರದ ಬೆಳೆ ಬೆಳೆದು ನಿಂತಾಗ ರೈತ ಅದರಲ್ಲಿ ಹೋಗಿ ಪೋಷಕಾಂಶ, ಕೀಟನಾಶಕ ಮತ್ತು ರಸಗೊಬ್ಬರಗಳನ್ನು ಸಿಂಪಡಣೆ ಮಾಡಲು ತೊಂದರೆ ಅನುಭವಿಸುತ್ತಿದ್ದ. ಹಲವು ಬಾರಿ ಹಾವು ಕಡಿತ ಸಾವು ನೋವುಗಳು ಕೂಡ ಸಂಭವಿಸಿವೆ. ಈ ಎಲ್ಲದಕ್ಕೂ ಈಗ ಪರಿಹಾರವಾಗಿ ಡ್ರೋಣ್ ಮೂಲಕ ಸಿಂಪಡಣೆ ಕಾರ್ಯ ಆರಂಭಗೊಂಡಿದೆ. ಎಕರೆ ಪ್ರದೇಶದಲ್ಲಿ ರಸಗೊಬ್ಬರ, ಕೀಟನಾಶಕ ಸಿಂಪಡಣೆ ಮಾಡಲು ಸುಮಾರು 4-5 ಗಂಟೆಗಳ ಸಮಯ ಬೇಕಾಗುತ್ತಿತ್ತು. ಅಲ್ಲದೇ ಕಾರ್ಮಿಕರ ಕೊರತೆ ಬೇರೆ. ಆದರೇ ಡ್ರೋಣ್ ಮೂಲಕ ಸಿಂಪಡಣೆ ಕಾರ್ಯ ಕೈಗೊಂಡರೇ ಸಮಯ ಮತ್ತು ಹಣ ಎರಡು ಉಳಿತಾಯವಾಗುತ್ತಿದೆ ಎನ್ನುತ್ತಾರೆ ಈ ಹೊಸ ಉಪಕ್ರಮದ ಸದುಪಯೋಗ ಪಡೆದ ರೈತ ಮಹಿಳೆಯರು.

ಮೊದಲೆಲ್ಲ ರೈತರು ಕೀಟನಾಶಕಗಳನ್ನು ಸಿಂಪಡಣೆ ಮಾಡಿ ಸರಿಯಾಗಿ ಕೈ ತೊಳೆಯದೇ ಆಹಾರ ಸೇವಿಸುತ್ತಿದ್ದರು. ಇದು ರೈತರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿತ್ತು. ಎತ್ತರಕ್ಕೆ ಬೆಳೆದ ಬೆಳೆಗಳನ್ನು ಸುರಕ್ಷಿತವಾಗಿಡಲೂ ಕೀಟನಾಶಕ ಸಿಂಪಡಣೆ ಮಾಡುವಾಗ ತೊಂದರೆಯಾಗುತ್ತಿತ್ತು. ಆದರೀಗ ಕೃಷಿ ಇಲಾಖೆ ನೂತನ ತಂತ್ರಜ್ಞಾನದ ಮೂಲಕ ಸಮಯ ಮತ್ತು ಹಣ ಉಳಿತಾಯದೊಂದಿಗೆ ರೈತನ ಚಿಂತೆಯನ್ನು ದೂರಗೊಳಿಸಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದರು.

ಎಕರೆಗೆ ಆಳಿನ ಮೂಲಕ ಸಿಂಪಡಣೆ ಕಾರ್ಯ ಕೈಗೊಂಡರೇ ಪ್ರತಿ ಆಳಿಗೆ ನೂರಾರು ರೂಪಾಯಿ ಕೂಲಿ ನೀಡಬೇಕಾಗಿತ್ತು. 4-5 ತಾಸಿನ ಕೆಲಸ ಕೆಲವೇ ನಿಮಿಷಗಳಲ್ಲಿ ಡ್ರೋಣ್ ಮೂಲಕ ಮುಕ್ತಾಯಗೊಳ್ಳುತ್ತದೆ. ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ 45 ಡ್ರೋಣಗಳು ಸಿಂಪಡಣೆ ಕಾರ್ಯಕ್ಕೆ ಲಭ್ಯವಿದ್ದು, ಕಿತ್ತೂರು ಬೈಲಹೊಂಗಲ ಬಾಗೇವಾಡಿ ಭಾಗದ ರೈತರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಡ್ರೋಣ್ ಬಾಡಿಗೆದಾರರನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆ ಜಂಟಿ ಆಯುಕ್ತ ಶಿವನಗೌಡ ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ಹುಕ್ಕೇರಿ ಕೃಷಿ ಅಧಿಕಾರಿಗಳು ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!