ಜೈ ಹನುಮ…ಪಾವನ ಜನುಮ…ಅನ್ನೋ ಮಾತಿದೆ…ರಾಮನ ಭಕ್ತ ಆಂಜನೇಯ..ಆದ್ರೆ ಆಂಜನೇಯನ ಭಕ್ತರು ಎಲ್ಲಡೆಯೂ ಎಲ್ಲೆಲ್ಲೂ ಸಿಗುತ್ತಾರೆ. ಇಂತಹ ಹನುಮ ಭಕ್ತರ ಸಾಗರವೇ ಇಲ್ಲಿ ನೆರೆದಿದೆ ನೋಡಿ…ಅಷ್ಟಕ್ಕೂ ಅದು ಎಲ್ಲಿ ಅಂತೀರಾ ಹಾಗಾದರೆ ಈ ವರದಿ ನೋಡಿ..

ಏನ್ ವೈಭವ…ಏನ್ ರಥ..ಎಂತ ಚಂದ ಐತೆಲ್ರೀ ಹನುಮನ ಮೂರುತಿ ಹೌದು ಚಿಕ್ಕೋಡಿ ತಾಲ್ಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ ಹನುಮಾನ ಮಂದಿರದ ನೂತನ ಕಟ್ಟಡದ ವಾಸ್ತುಶಾಂತಿ ಹಾಗೂ ಆಂಜನೇಯ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ನಿಮಿತ್ಯವಾಗಿ ಕುಂಬ ಮೇಳವನ್ನು ಆಯೋಜನೆ ಮಾಡಲಾಗಿತ್ತು.
ರಾಮನ ಬರುವಿಕೆಗಾಗಿ ಶಬರಿ ಕಾದು ಕುಳಿತ ಕಥೆ ಇದೆಯಲ್ಲ..! ಹಾಗೇನೆ ಬೆಣ್ಣಿಹಳ್ಳಿ ಗ್ರಾಮದ ಬೆಣ್ಣೆಯಂತಹ ಮನಸ್ಸುಗಳು ಮಾರುತಿ ದೇವರ ಮೂರ್ತಿಯ ಸ್ವಾಗತಕ್ಕಾಗಿ ಕಾದು ಕುಳಿತಿದ್ದರು.
ಹುಕ್ಕೇರಿ ತಾಲ್ಲೂಕಿನ ಕ್ಯಾರಗುಡ್ಡದಿಂದ ಆಂಜನೇಯ ಮೂರ್ತಿ ಬರುತ್ಯಿದ್ದಂತೆ ಮೂರ್ತಿ ಮೆರವಣಿಗೆಗೆ ಕಾತರರಾಗಿದ್ದರು ಗ್ರಾಮಸ್ಥರು. ಹಾಗಾಗಿಯೇ ಗ್ರಾಮದ ಹೊರ ವಲಯದಲ್ಲಿ ಇರೋ ಲಕ್ಷ್ಮೀ ದೇವಸ್ಥಾನದಿಂದ 2 ರಿಂದ 3 ಕಿಲೋ ಮೀಟರ್ ವರೆಗೆ ಸಹಸ್ರಾರು ಸುಮಂಗಲೆಯರು ತಲೆ ಮೇಲೆ ಕುಂಭ ಹೊತ್ತು ಆಂಜನೇಯನನ್ನು ಗ್ರಾಮಕ್ಕೆ ಸ್ವಾಗತಿಸಿಕೊಂಡ ಪರಿ ನೋಡಲು ಎರಡು ಕಣ್ಣುಗಳು ಸಾಲದಂತಿದ್ದವು. ಸಹಸ್ರಾರು ಮಹಿಳೆಯರು ತಲೆ ಮೇಲೆ ಕುಂಭ ಹೊತ್ತು ನಡೆಯುತ್ತಿರೋದನ್ನು ನೋಡಿದ್ರೆ ಸ್ವರ್ಗವೇ ಧರೆಗೆ ಇಳಿದಂತೆ ಕಾಣುತ್ತಿತ್ತು. ಹಸಿರು ಹೊದ್ದ ಭೂ ತಾಯಿಯ ನಡುವೆ ಸೀಳಿಕೊಂಡು ಹೋಗಿರುವ ರಸ್ತೆಯಲ್ಲಿ ಸಹಸ್ರಾರು ಮಹಿಳೆಯರು ಕಲಶ ಹೊತ್ತು ಸಾಗುತ್ತಿರೋ ದೃಶ್ಯವು ಮಾರುತಿಗೆ ಹಾಕಿರೋ ಹೂ ಮಾಲೆಯಂತೆ ಶೋಭಿಸುತ್ತಿತ್ತು.
ಕುಂಭ ಹೊತ್ತ ಮಹಿಳೆರು ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡಿದ್ರು…
ಉರಿವ ಬಿಸಲನ್ನೂ ಕೂಡ ಲೆಕ್ಕಿಸದೇ ಮಹಿಳೆಯರು, ಯುವತಿಯರು ಸಿಂಗಾರಗೊಂಡು, ತಲೆ ಮೇಲೆ ಹೊತ್ತು ಕಲಶವನ್ನು ಕೂಡ ಹೂ ಮಾಲೆ ಹಾಗೂ ಕುಪ್ಪಸದಿಂದ ಸಿಂಗರಿಸಿದ್ದರು. ಆಂಜನೇಯ ಮೂರ್ತಿ, ಶಿವಲಿಂಗ ಹಾಗೂ ನಂದಿ ವಿಗ್ರಹಗಳನ್ನು ಕುಳ್ಳಿರಿಸಿಕೊಂಡು ಏಳು ಕುದುರೆಗಳ ಬೆಳ್ಳಿ ರಥದಲ್ಲಿ ಸಾಗುತ್ತಿದ್ದರೆ, ಭಕ್ತರು ಅಲ್ಲಲ್ಲಿ ನೀರು ಹಾಕಿ, ನೈವೇದ್ಯ ಹಿಡಿದು ನಮಿಸಿದರು. ಇನ್ನು, ರಥದ ಮುಂದೆ ಭಾಜಾ ಭಜಂತ್ರಿ, ವಾಲಗದವರು ವಾದ್ಯ ನುಡಿಸುತ್ತಿದ್ದರೆ, ಬಿಳಿ ಬಣ್ಣದ ಕುದುರೆಯು ವಾದ್ಯಗಳ ಸದ್ದಿಗೆ ಥಕ ಥೈ..ಥಕ ಥೈ ಅಂತಾ ಹೆಜ್ಜೆ ಹಾಕಿ ದಾರಿಯುದ್ದಕ್ಕೂ ನೃತ್ಯ ಮಾಡುತ್ತಿದ್ದರೆ ನಾಟ್ಯ ಮಯೂರಿಯೇ ನಾಚುವಂತಿತ್ತು. ಪುರುಷರು ತಲೆ ಮೇಲೆ ಗುಲಾಬಿ ಪೇಟವನ್ನು ಸುತ್ತಿಕೊಂಡಿದ್ದರೆ, ಯುವಕರು ಬಿಳಿಯ ಬಣ್ಣದ ಪ್ಯಾಂಟ್ ಶರ್ಟ ಧರಿಸಿಕೊಂಡು ಕೊರಳಿಗೆ ಕೇಸರಿ ಶಾಲು ಹಾಕಿಕೊಂಡು ” ಜೈ ಶ್ರೀ ರಾಮ..ಜೈ ಜೈ ಶ್ರೀರಾಮ..” ” ಜೈ ಮಾರುತಿ” ಅಂತಾ ಜಯಘೋಷ ಹಾಕುತ್ತಿದ್ದರು. ಮತ್ತೊಂದು ಕಡೆಗೆ ಆಂಜನೇಯನ ಚಿತ್ರ ಹೊಂದಿದ ಬಾವುಟವನ್ನು ಕೈಯಲ್ಲಿ ಹಿಡಿದು ಕುಣಿಯುತ್ತಿದ್ದರು.
ಇನ್ನೊಂದೆಡೆ ಕುಂಬಮೇಳ ಹೊತ್ತ ಮಹಿಳೆಯರು ಬಿಸಿಲಿನಿಂದ ಬಳಲುತ್ತಿರೋದನ್ನು ಕಂಡು ರಸ್ತೆಯ ಇಕ್ಕೆಲಗಳಲ್ಲಿ ಇರೋ ಮನೆಯವರು ನೀರು ಕೊಟ್ಟು ಬಾಯಾರಿಕೆ ನೀಗಿಸಿದರೆ, ಇನ್ನು ಕೆಲವರು ಮಜ್ಜಿಗೆಯನ್ನು ಕೊಟ್ಟು ಬಿಸಿಲ ಬೇಗೆಯನ್ನು ಹೋಗಲಾಡಿಸಲು ತಮ್ಮದೇ ಆದ ಸೇವೆಯನ್ನು ಸಲ್ಲಿಸಿದರು.
ಹೀಗೆ ಭಾಜಾ ಭಜಂತ್ರಿಯೊಂದಿಗೆ ಆಗಮಿಸಿದ ಕುಂಭಮೇಳವು ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡ ಆಂಜನೇಯ ದೇವಸ್ಥಾನ ತಲುಪುವಷ್ಟರಲ್ಲಿ ನೇಸರ ಜಾರಿಕೊಂಡು ನೀಲಾಗಸದಲ್ಲಿ ಲೀನವಾಗಿದ್ದನು. ಜೀರ್ಣೋದ್ದಾರಗೊಂಡ ಮಾರುತಿ ಮಂದಿರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕುಂಬ ಹೊತ್ತು ದೇವಸ್ಥಾನಕ್ಕೆ ಆಗಮಿಸಿದ ಮಹಿಳೆಯರು ಆಂಜನೇಯನಿಗೆ ನಮಿಸಿದ್ರು.
ಒಟ್ಟಿನಲ್ಲಿ ಬೆಣ್ಣಿಹಳ್ಳಿ ಗ್ರಾಮದಲ್ಲಿ ಹನುಮನ ಮೂರ್ತಿಯ ಪ್ರಾಣಪ್ರತಿಷ್ಠಾಣದ ಅಂಗವಾಗಿ ಹನುಮನ ಮೂರ್ತಿಯ ಮೇರವಣಿಗೆ ಹಾಗೂ ಕುಂಭಮೇಳವು ಎಲ್ಲರ ಜನಮನ ಸೆಳೆಯಿತು
