Belagavi

ಡಾ. ಶರಣಕುಮಾರ ಲಿಂಬಾಳೆ ವಿವಾದಾತ್ಮಕ ಹೇಳಿಕೆಗೆ ಯಳ್ಳೂರು ಎಂಇಎಸ್ ತೀವ್ರ ಖಂಡನೆ: ಕ್ಷಮೆಯಾಚನೆ ಹಾಗೂ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಆಗ್ರಹ!

Share

ಪುಣೆಯಲ್ಲಿ ನಡೆಯಲಿರುವ 100ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ. ಶರಣಕುಮಾರ ಲಿಂಬಾಳೆ ಅವರ ವಿವಾದಾತ್ಮಕ ಹೇಳಿಕೆ ಈಗ ಗಡಿಭಾಗದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಾವಿಯ ಯಳ್ಳೂರು ವಿಭಾಗದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಲಿಂಬಾಳೆ ಅವರ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ತಕ್ಷಣವೇ ಕ್ಷಮೆಯಾಚಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ.

ಪುಣೆಯಲ್ಲಿ ಜರುಗಲಿರುವ 100ನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ನೂತನ ಅಧ್ಯಕ್ಷ ಡಾ. ಶರಣಕುಮಾರ ಲಿಂಬಾಳೆ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬೆಳಗಾವಿ ಗಡಿ ವಿವಾದದ ಕುರಿತು ನೀಡಿದ್ದ ಹೇಳಿಕೆಗೆ ಯಳ್ಳೂರು ವಿಭಾಗದ ಎಂಇಎಸ್ ವತಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. “ಬೆಳಗಾವಿ ಏನು ಪಾಕಿಸ್ತಾನದಲ್ಲಿದೆಯೇ? ಮರಾಠಿ ಮಾತನಾಡುವ ಪ್ರದೇಶಗಳನ್ನೆಲ್ಲಾ ಮಹಾರಾಷ್ಟ್ರಕ್ಕೆ ಸೇರಿಸಲು ಸಾಧ್ಯವೇ? ಗಡಿಭಾಗದ ಜನರು ತಾವಿರುವ ರಾಜ್ಯದ ಭಾಷೆ ಮತ್ತು ಸಂಸ್ಕೃತಿಯನ್ನು ಒಪ್ಪಿಕೊಳ್ಳಬೇಕು” ಎಂಬ ಲಿಂಬಾಳೆ ಅವರ ಮಾತುಗಳು ಗಡಿಭಾಗದ ಜನರ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಎಂಇಎಸ್ ಕಾರ್ಯಕರ್ತರು ಕಿಡಿಕಾರಿದ್ದಾರೆ. ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದಂತಹ ಪ್ರತಿಷ್ಠಿತ ವೇದಿಕೆಯ ಅಧ್ಯಕ್ಷ ಸ್ಥಾನದಲ್ಲಿದ್ದುಕೊಂಡು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಅತ್ಯಂತ ದುರದೃಷ್ಟಕರ ಎಂದು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1946ರಲ್ಲಿ ಬೆಳಗಾವಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲೇ ಸಂಯುಕ್ತ ಮಹಾರಾಷ್ಟ್ರದ ನಿರ್ಣಯ ಮಂಡಿಸಲಾಗಿತ್ತು ಎಂಬ ಇತಿಹಾಸವನ್ನು ಲಿಂಬಾಳೆ ಮರೆತಿದ್ದಾರೆ ಎಂದು ಟೀಕಿಸಿರುವ ಎಂಇಎಸ್ ಮುಖಂಡರು, ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಗಡಿಭಾಗದ ಜನರ ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ನೈತಿಕ ಹೊಣೆ ಹೊತ್ತು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇಲ್ಲವಾದಲ್ಲಿ ಸಾಹಿತ್ಯ ಮಹಾಮಂಡಳವೇ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಚಾರವನ್ನು ಮಹಾರಾಷ್ಟ್ರ ಸರ್ಕಾರ ಮತ್ತು ಸಾಹಿತ್ಯ ಪರಿಷತ್ ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ಯಳ್ಳೂರು ಸೇರಿದಂತೆ ಇಡೀ ಗಡಿಭಾಗದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಈ ಪ್ರತಿಭಟನಾ ಸಭೆಯಲ್ಲಿ ಹಿರಿಯ ಮುಖಂಡರಾದ ವಿ.ಡಿ. ಪಾಟೀಲ, ದೌಲತ್ ಕುಗಜಿ, ಡಿ.ಜಿ. ಪಾಟೀಲ, ಸತೀಶ್ ಪಾಟೀಲ, ಪ್ರಮೋದ್ ಪಾಟೀಲ ಸೇರಿದಂತೆ ಅನೇಕ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Tags:

error: Content is protected !!