ಬೆಳಗಾವಿಯ ಐತಿಹಾಸಿಕ ಜಕ್ಕೇರಿ ಹೊಂಡ ಈಗ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಗವಳಿ ಸಮಾಜದ ಬಾಂಧವರು ಈಗ ತಾವೇ ಖುದ್ದಾಗಿ ಸ್ವಚ್ಛತಾ ಕಾರ್ಯಕ್ಕೆ ಇಳಿದಿದ್ದು, ಹೊಂಡಕ್ಕೆ ನೀರು ಹರಿಸದಿದ್ದರೆ ಕಾಂಕ್ರೀಟ್ ಒಡೆದು ನೀರು ಬಿಡುವ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯ ಇಂದ್ರಪ್ರಸ್ಥ ನಗರದ ರೈಲ್ವೆ ಓವರ್ ಬ್ರಿಜ್ ಬಳಿಯಿರುವ ಐತಿಹಾಸಿಕ ಜಕ್ಕೇರಿ ಹೊಂಡ (ರಾಮತೀರ್ಥ) ಸೂಕ್ತ ನಿರ್ವಹಣೆಯಿಲ್ಲದೆ ಅಸ್ವಚ್ಛತೆಯ ಆಗರವಾಗಿದೆ. ಸಾರ್ವಜನಿಕರು ನಿತ್ಯವೂ ತ್ಯಾಜ್ಯ ಹಾಗೂ ಪೂಜೆಯ ನಿರ್ಮಾಲ್ಯವನ್ನು ತಂದು ಹೊಂಡಕ್ಕೆ ಎಸೆಯುತ್ತಿರುವುದರಿಂದ ಇಡೀ ಕೊಳ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಈ ಬಗ್ಗೆ ಆಡಳಿತ ಮಂಡಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಈ ದಿವ್ಯ ನಿರ್ಲಕ್ಷ್ಯದಿಂದ ಬೇಸತ್ತ ಗವಳಿ ಸಮಾಜದ ಸದಸ್ಯರು, ಇದೀಗ ತಾವೇ ಸೇರಿಕೊಂಡು ಹೊಂಡದ ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಗವಳಿ ಸಮಾಜದ ಮುಖಂಡರು, ಹೊಂಡವನ್ನು ಸ್ವಚ್ಛಗೊಳಿಸಿ ನೀರು ಹರಿಸುವಂತೆ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿತ್ತು. ಡಿಸಿ ಅವರು ನೀರು ಬಿಡುವ ಭರವಸೆ ನೀಡಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಇನ್ನು ಇದೇ ನಿರ್ಲಕ್ಷ್ಯ ಮುಂದುವರಿದರೆ, ನೀರಿನ ಹರಿವಿಗೆ ಅಡ್ಡಲಾಗಿ ಹಾಕಿರುವ ಕಾಂಕ್ರೀಟ್ ಅನ್ನು ತಾವೇ ತೆರವುಗೊಳಿಸಿ ಹೊಂಡಕ್ಕೆ ನೀರು ಬಿಡುವುದಾಗಿ ಸಮಾಜದ ಬಾಂಧವರು ಎಚ್ಚರಿಕೆ ನೀಡಿದ್ದಾರೆ.
ಇನ್ನಾದರೂ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡು ಜಕ್ಕೇರಿ ಹೊಂಡದ ಸಂರಕ್ಷಣೆಗೆ ಮುಂದಾಗಬೇಕಿದೆ.
