ಬೆಳಗಾವಿಯಲ್ಲಿ ಮುಂದಿನ ತಿಂಗಳು ನಡೆಯುವ ಅಧಿವೇಶದಲ್ಲಿ ಗೋ ಹತ್ಯೆ ಹಾಗೂ ಮತಾಂತರ ಕಾಯ್ದೆಗಳ ಹಿಂಪಡೆಯಲು ನಿರ್ಧರಿಸಿದ್ದು, ಇದನ್ನು ಶ್ರೀರಾಮ ಸೇನೆ ತೀವ್ರವಾಗಿ ಖಂಡಿಸಲಿದೆ. ಒಂದು ವೇಳೆ ಕಾಯ್ದೆ ವಾಪಾಸ್ ಪಡೆದರೆ ರಾಜ್ಯಾದ್ಯಂತ ಗೋ ಗಳ ಸಮೇತ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಾಹಕ್ಕಾಗಿ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ರಾಜ್ಯದ ಗಡಿ ಭಾಗದಲ್ಲಿ ನೂರಾರು ಗೋ ಹತ್ಯೆ ನಡೆಯುತ್ತಿದೆ. ನಿತ್ಯ ೧೦ ಗೋ ಹತ್ಯೆಗಳು ನಡೆಯುತ್ತಿವೆ. ಈಗ ಸರ್ಕಾರದ ಕಾಯ್ದೆ ಹಿಂದೆಪಡೆದರೆ ಎಂಥಹ ಪರಿಸ್ಥಿತಿ ಎದುರಾಗಬಹುದು ಎಂದು ಕಿಡಿಕಾಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಎರಡು ಕಾಯ್ದೆ ಜಾರಿಗೆ ತಂದರು. ಆದರೂ ಸಹ ಗೋ ಹತ್ಯೆ ತಡೆಯಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರದ ಗೋ ಹತ್ಯೆ ಕಾಯ್ದೆ ವಾಪಾಸ್ ಪಡೆದರೆ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ರಾಜ್ಯ ಸರ್ಕಾರದ ತುಷ್ಟೀಕರಣ ಹಾಗೂ ಪೊಲೀಸ್ ಭ್ರಷ್ಟ ವ್ಯವಸ್ಥೆಯೇ ಇದಕ್ಕೆ ಕಾರಣ ಎಂದರು.
ಗೋ ಹತ್ಯೆ ಸಂಬಂಧಿಸಿ ರಕ್ಷಣೆಗೆ ನಿಂತ ೮೦೦ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಾಗಿದೆ. ೩೮ ಜನರ ಮೇಲೆ ಮುಸ್ಲಿಮರು ಹಾಗೂ ಗೋ ಹಂತಕರು ಹಲ್ಲೆ ಮಾಡಿದ್ದಾರೆ. ಯಾವುದೇ ಅನುಮತಿ ಪಡೆಯದೆ ೫ ಸಾವಿರ ಕಾನೂನು ಬಾಹಿರ ಕಸಾಯಿ ಖಾನೆ ಗಳಿವೆ ಎಂದು ಆರೋಪಿಸಿದರು.
ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಂಘಟನೆಗಳು ಈಚೆಗೆ ಹೋರಾಟ ಮಾಡಿ ಸರ್ಕಾರದ ಮೇಲೆ ಒತ್ತಡ ಹಾಕಿವೆ. ಇದರಿಂದ ರಾಜ್ಯ ಸರ್ಕಾರದ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುತ್ತಿದೆ ಎಂದು ದೂರಿದರು.
ಶ್ರೀರಾಮ ಸೇನೆ ಮುಖಂಡರಾದ ಮಂಜುನಾಥ ಕಾಟಕರ, ಬಸ್ಸು ಗೌಡರ, ಬಸ್ಸು ದುರ್ಗದ ಇದ್ದರು.
