ಹುಬ್ಬಳ್ಳಿಯಲ್ಲಿ ಲಾರಿ ಚಾಲಕನೊಬ್ಬನ ಅಜಾಗರೂಕತೆಗೆ ಪುರಾತನ ಬನ್ನಿ ಮರ ಉರುಳಿಬಿದ್ದಿದ್ದು, ಪಕ್ಕದಲ್ಲೇ ಇದ್ದ ದೇವಸ್ಥಾನಕ್ಕೂ ಹಾನಿಯಾಗಿರುವ ಘಟನೆ ನಡೆದಿದೆ.
ಹುಬ್ಬಳ್ಳಿಯ ಹೊಸೂರ ಕಾಟನ್ ಮಾರ್ಕೆಟ್ ಸಮೀಪವಿರುವ ಬನ್ನಿ ಮರ ದೇವಸ್ಥಾನಕ್ಕೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಲಾರಿ ನೇರವಾಗಿ ಬನ್ನಿ ಮರ ಹಾಗೂ ದೇವಸ್ಥಾನಕ್ಕೆ ದಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಬೃಹತ್ ಬನ್ನಿ ಮರ ಬುಡಸಮೇತ ಉರುಳಿಬಿದ್ದಿದ್ದು, ದೇವಸ್ಥಾನದ ಕಟ್ಟಡಕ್ಕೂ ತೀವ್ರ ಧಕ್ಕೆಯಾಗಿದೆ. ಈ ದೇವಸ್ಥಾನಕ್ಕೆ ಸ್ಥಳೀಯ ಭಕ್ತರು ಪ್ರತಿನಿತ್ಯ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಘಟನೆಯಿಂದ ಸ್ಥಳೀಯರು ಹಾಗೂ ಭಕ್ತರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಟ್ರಕ್ ಚಾಲನೆ ಮಾಡಿ ಅವಘಡಕ್ಕೆ ಕಾರಣನಾದ ಚಾಲಕನ ವಿರುದ್ಧ ಪೊಲೀಸರು ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
