ಸವದತ್ತಿ ಯಲ್ಲಮ್ಮ ದೇವಿಗೆ ಸರ್ಪ ದೋಷ ಇಲ್ಲ ಎಂಬ ಸ್ಪಷ್ಟನೆ ಈಗ ಎಲ್ಲೆಡೆ ಗಮನ ಸೆಳೆದಿದೆ. ವಾಟ್ಸ್ಆ್ಯಪ್ನಲ್ಲಿ ಹರಿದಾಡಿದ ಸುಳ್ಳು ಸುದ್ದಿ ನಂಬಿ ಯಾದಗಿರಿಯ ಭೀಮಾ ನದಿಯಲ್ಲಿ ಸಾವಿರಾರು ಮಹಿಳೆಯರು ಸ್ನಾನ ಮಾಡಿದ ಘಟನೆಯ ಬೆನ್ನಲ್ಲೇ, ದೇವಸ್ಥಾನದ ಅರ್ಚಕರು ಮತ್ತು ಪ್ರಾಧಿಕಾರದ ಅಧಿಕಾರಿಗಳು ಈ ವದಂತಿಯನ್ನು ತಳ್ಳಿಹಾಕಿ ಭಕ್ತರಿಗೆ ಮಹತ್ವದ ಮನವಿ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಿಯ ಮೈಮೇಲೆ ಹಾವು ಸುತ್ತಿಕೊಂಡಿದೆ ಹಾಗೂ ದೇವಿಯ ಪಾದುಕೆಯನ್ನು ಹಾವು ನುಂಗಿದೆ ಎಂಬ ಸುಳ್ಳು ಸುದ್ದಿಯೊಂದು ಕಳೆದ ಕೆಲವು ದಿನಗಳಿಂದ ವಾಟ್ಸ್ಆ್ಯಪ್ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿತ್ತು. ಈ ಸರ್ಪ ದೋಷ ನಿವಾರಣೆಗಾಗಿ ನದಿಯಲ್ಲಿ ಸ್ನಾನ ಮಾಡಿ, ಹಳೆಯ ಪಾದುಕೆ ಬಿಚ್ಚಿ ಹೊಸ ಪಾದುಕೆ ಕಟ್ಟಿಕೊಳ್ಳಬೇಕು ಮತ್ತು ಹಳೆಯ ಬಟ್ಟೆ ಬದಲಿಸಿ ಹೊಸ ಬಟ್ಟೆ ಧರಿಸಬೇಕು ಎಂಬ ವದಂತಿಯನ್ನು ನಂಬಿದ ಯಾದಗಿರಿ ಹೊರವಲಯದ ಭೀಮಾ ನದಿಯಲ್ಲಿ ಮಂಗಳವಾರ ಒಂದೇ ದಿನ ಮೂರು ಸಾವಿರಕ್ಕೂ ಅಧಿಕ ಮಹಿಳೆಯರು ಪೂಜೆ ಸಲ್ಲಿಸಿ ಪುಣ್ಯಸ್ನಾನ ಮಾಡಿದ್ದಾರೆ. ಪಾದುಕೆ ಕಟ್ಟಿಕೊಂಡ ಯಲ್ಲಮ್ಮನ ಆರಾಧಕರು ಹೆಚ್ಚಿನ ಸಂಖ್ಯೆಯಲ್ಲಿ ನದಿ ತೀರದಲ್ಲಿ ಜಮಾಯಿಸಿ ಈ ಆಚರಣೆಯಲ್ಲಿ ಪಾಲ್ಗೊಂಡಿದ್ದು, ಸಾಮಾಜಿಕ ಜಾಲತಾಣಗಳ ಅಪಪ್ರಚಾರ ಎಷ್ಟರಮಟ್ಟಿಗೆ ಜನರನ್ನು ದಾರಿ ತಪ್ಪಿಸಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಈ ವದಂತಿ ಕುರಿತು ಪ್ರತಿಕ್ರಿಯಿಸಿರುವ ಸವದತ್ತಿ ಯಲ್ಲಮ್ಮ ದೇವಸ್ಥಾನದ ಅರ್ಚಕ ರಾಜು ಪಾಟೀಲ್, ಯಲ್ಲಮ್ಮ ದೇವಿಗೆ ಸರ್ಪ ದೋಷ ಹೇಗೆ ಆಗಲು ಸಾಧ್ಯ ಎಂದು ಪ್ರಶ್ನಿಸಿದ್ದು, ಇದೆಲ್ಲವೂ ಸಂಪೂರ್ಣ ಸುಳ್ಳು ವದಂತಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಜಗನ್ಮಾತೆಯಾದ ದೇವಿ ಎಲ್ಲರನ್ನೂ ಕಾಪಾಡುವ ಶಕ್ತಿಯಾಗಿದ್ದು, ಇಂತಹ ಸುಳ್ಳು ಸುದ್ದಿಗಳನ್ನು ಯಾರೂ ಹಬ್ಬಿಸಬಾರದು ಮತ್ತು ಭಕ್ತರು ಇದಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ. ಯಾದಗಿರಿಯಲ್ಲಿ ಇಂತಹ ಆಚರಣೆ ನಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹ ಹೊಸ ಪದ್ಧತಿಗಳನ್ನು ಯಾರೂ ಅನುಸರಿಸಬಾರದು, ನಮ್ಮದು ಅತ್ಯಂತ ದೊಡ್ಡ ದೇಗುಲವಾಗಿದ್ದು ಯಾವುದೇ ಆಚರಣೆಗಳಿದ್ದರೂ ಭಕ್ತರು ತಮ್ಮ ತಮ್ಮ ಮನೆಗಳಲ್ಲೇ ಸಾಂಪ್ರದಾಯಿಕವಾಗಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಾಜಶ್ರೀ ಜೈನಾಪುರೆ ಮಾತನಾಡಿ, ಭೀಮಾ ತೀರದಲ್ಲಿ ನಡೆಯುತ್ತಿರುವುದು ಕಂಪ್ಲೀಟ್ ಸುಳ್ಳು ಸುದ್ದಿಯಾಗಿದ್ದು, ದೇವಸ್ಥಾನದಲ್ಲಿ ಅಂತಹ ಯಾವುದೇ ಘಟನೆ ಅಥವಾ ದೋಷಗಳು ಸಂಭವಿಸುತ್ತಿಲ್ಲ ಎಂದು ಖಚಿತಪಡಿಸಿದ್ದಾರೆ. ನಿತ್ಯ ಲಕ್ಷಾಂತರ ಭಕ್ತರು ಭಕ್ತಿ ಶ್ರದ್ಧೆಯಿಂದ ಸವದತ್ತಿಗೆ ಆಗಮಿಸುತ್ತಿದ್ದು, ಇತ್ತೀಚಿನ ಹೂಂಡಿ ಎಣಿಕೆಯಲ್ಲಿಯೂ ದಾಖಲೆಯ ಪ್ರಮಾಣದ ಸಂಗ್ರಹವಾಗಿರುವುದೇ ಭಕ್ತರ ಹೆಚ್ಚಿನ ಆಗಮನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ದೇವಸ್ಥಾನದ ಅರ್ಚಕ ಪ್ರಮುಖರಾದ ಯಡಿಯೂರಪ್ಪ ಮಾತನಾಡಿ, ಸುಳ್ಳು ವದಂತಿಗಳನ್ನು ತಪ್ಪಾಗಿ ಬಿಂಬಿಸಬಾರದು, ಮಹಿಳೆಯರು ಕೊರಳಲ್ಲಿರುವ ಮುತ್ತು, ಮಾಂಗಲ್ಯವನ್ನು ತೆಗೆಯಬಾರದು ಹಾಗೂ ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯನ್ನೇ ಮುಂದುವರಿಸಬೇಕು, ಯಲ್ಲಮ್ಮ ದೇವಿಗೆ ಯಾವುದೇ ದೋಷ ಇರುವುದಿಲ್ಲ ಎಂದು ಭಕ್ತರಲ್ಲಿ ಧೈರ್ಯ ತುಂಬಿದ್ದಾರೆ.
ಸ್ವತಃ ರೇಣುಕಾ ಯಲ್ಲಮ್ಮದೇವಿ ಸರ್ಪರೂಪ ಧಾರಣ ಮಾಡಿ ಪ್ರತಿನಿತ್ಯ ಬ್ರಾಹ್ಮಿ ಮೂಹೂರ್ತದಲ್ಲಿ ಸ್ನಾನಕ್ಕೆ ತೆರಳುತ್ತಾಳೆ ಎಂಬ ನಂಬಿಕೆಯೂ ಇದೆ. ಅಲ್ಲದೇ ಸ್ವತಃ ಮರಳಿನ ಮಡಿಕೆ ಮಾಡಿದಾಗ ಆಕೆ ಹಾವಿನ ಸಿಂಬೆ ಸುತ್ತಿಕೊಂಡಿದ್ದಳೆಂದಾಗ ಈಗ ಸರ್ಪದೋಷ ಎಂಬ ವದಂತಿ ಎಷ್ಟರ ಮಟ್ಟಿಗೆ ನಿಜ ಎಂಬುದು ಗೊಂದಲವಂನ್ನುಟು ಮಾಡಿದೆ.
