ಕುಂದಾನಗರಿ ಬೆಳಗಾವಿಯಲ್ಲಿ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಸೊಗಡು ಅನಾವರಣಗೊಂಡಿದೆ. ಬೆಳಗಾವಿ ಉತ್ತರ ವಲಯದ ಸುಮಾರು 25 ಮಹಿಳಾ ಮಂಡಳಗಳು ಒಂದಾಗಿ ‘ಶ್ರೀ ಮಹಾಲಕ್ಷ್ಮೀ ನಾಡ ಹಬ್ಬ ಸಂಭ್ರಮ-2026’ರ ಅಡಿಯಲ್ಲಿ ‘ಕನ್ನಡ ಸೌರಭ’ ಸಾಂಸ್ಕೃತಿಕ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಬೆಳಗಾವಿಯ ಕುಮಾರ ಗಂಧರ್ವ ಹಾಲ್ನಲ್ಲಿ ನವೆಂಬರ್ 25ರಂದು ‘ಶ್ರೀ ಮಹಾಲಕ್ಷ್ಮೀ ನಾಡ ಹಬ್ಬ ಸಂಭ್ರಮ 2026’ರ ಅಂಗವಾಗಿ ‘ಕನ್ನಡ ಸೌರಭ’ ಸಾಂಸ್ಕೃತಿಕ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಸಾರೋಟದಲ್ಲಿ ನಾಡದೇವತೆ ಶ್ರೀ ಭುವನೇಶ್ವರಿಯ ಭಾವಚಿತ್ರವನ್ನಟ್ಟು ಭವ್ಯ ಮೆರವಣಿಗೆಯನ್ನು ನಡೆಸಲಾಯಿತು. ಈ ವೇಳೆ ಮಹಿಳಾಮಣಿಗಳ ಉತ್ಸಾಹ ಮುಗಿಲು ಮುಟ್ಟಿತ್ತು.

ಸಂಜೆ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಸ್ಪುಟವಾಗಿ ಮಾತನಾಡುವ ಸ್ಪರ್ಧೆ, ರಸಪ್ರಶ್ನೆ, ಸಾಂಸ್ಕೃತಿಕ ನೃತ್ಯ ಹಾಗೂ ಕರ್ನಾಟಕದ ವಿಶೇಷತೆ ಸಾರುವ ಭೂಪಟದ ರಂಗೋಲಿ ಸ್ಪರ್ಧೆಗಳು ನೋಡುಗರ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಶಿವಮೊಗ್ಗದ ಖ್ಯಾತ ಭಾಷಣಕಾರ ಡಾ. ರಾಹುಲ್ ದೇವರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಡಾ. ರವಿ ಪಾಟೀಲ ಹಾಗೂ ಶ್ರೀಮತಿ ಸುನೀತಾ ಎಂ. ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇ ವೇಳೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಹಾಗೂ ಪಾಲಿಕೆ ಸದಸ್ಯ ರಾಜಶೇಖರ ಢೋಣಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ನಾಡ ಉತ್ಸವ ಸಮಿತಿ ಅಧ್ಯಕ್ಷೆ ವಿದ್ಯಾ ಹುಂಡೇಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ, ಕನ್ನಡ ಎಂದರೆ ಕೇವಲ ಅಕ್ಷರವಲ್ಲ, ಅದು ನಮ್ಮ ಬದುಕಿನ ಮೌಲ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ವೇದಿಕೆಯಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ಬೆಳಗಾವಿ ಉತ್ತರ ವಲಯದ ಸುಮಾರು 23ಕ್ಕೂ ಹೆಚ್ಚು ಮಹಿಳಾ ಮಂಡಳಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಒಗ್ಗಟ್ಟಿನಿಂದ ಈ ಉತ್ಸವವನ್ನು ಯಶಸ್ವಿಗೊಳಿಸಿದ್ದು, ಮುಂದಿನ ದಿನಗಳಲ್ಲಿ ಈ ಕನ್ನಡ ಹಬ್ಬವನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಆಯೋಜಿಸುವ ಸಂಕಲ್ಪ ಮಾಡಲಾಯಿತು.

ಡಾ, ರವಿ ಪಾಟೀಲ್ ಅವರು ಮಾತನಾಡಿದ ಭಾರತ ಮಾತೆ ಮತ್ತು ಕರ್ನಾಟಕವನ್ನು ತಾಯಿಗೆ ಹೋಲಿಸುವುದರ ಹಿಂದೆ ತಾಯಿಯೇ ಮೊದಲ ಗುರು ಎಂಬ ಅರ್ಥವಿದ. ತಾಯಿ ತೋರಿದ ಹಾದಿಯಲ್ಲಿ ಸಾಗಿದರೆ ಜೀವನದಲ್ಲಿ ಯಶಸ್ಸು ಲಭಿಸುತ್ತದೆ. ತಾಯಂದಿರಲ್ಲಿರುವ ಕಲೆಗೆ ಸೂಕ್ತ ಅವಕಾಶ ನೀಡಿದಾಗ ಮಾತ್ರ ಅದು ಹೊರಬರಲು ಸಾಧ್ಯವಿದ್ದು, ಮನೆ ನಡೆಸಬಲ್ಲ ತಾಯಿ ದೇಶವನ್ನೂ ಮುನ್ನಡೆಸಬಲ್ಲಳು ಎಂದು ತಿಳಿಸಿದರು.
