State

ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಬಿಗ್ ಶಾಕ್: ಜಾಮೀನು ರದ್ದು, 14 ದಿನಗಳಲ್ಲಿ ಶರಣಾಗಲು ಆದೇಶ

Share

ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸುಪ್ರೀಂಕೋರ್ಟ್ ಬಿಗ್ ಶಾಕ್ ನೀಡಿದೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಮತ್ತು ಶಿಕ್ಷೆ ಅಮಾನತು ಆದೇಶವನ್ನು ಸುಪ್ರೀಂ ರದ್ದುಗೊಳಿಸಿದ್ದು, ಶಾಸಕ ಸ್ಥಾನಕ್ಕೂ ಕುತ್ತು ಎದುರಾಗಿದೆ.

ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿ ಜಾಮೀನು ಮಂಜೂರು ಮಾಡಿತ್ತು. ಆದರೆ, ಈ ಆದೇಶವನ್ನು ಪ್ರಶ್ನಿಸಿ ಸಿಬಿಐ ಹಾಗೂ ಯೋಗೀಶ್ ಗೌಡ ಸಹೋದರ ಗುರುನಾಥ್ ಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ನೇತೃತ್ವದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ, ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದೆ. ವಿನಯ್ ಕುಲಕರ್ಣಿ ಅವರೊಂದಿಗೆ ಜಾಮೀನು ಪಡೆದಿದ್ದ ಇತರ ಎಂಟು ಮಂದಿ ಅಪರಾಧಿಗಳ ಜಾಮೀನು ಮತ್ತು ಶಿಕ್ಷೆ ಅಮಾನತು ಆದೇಶವನ್ನೂ ಸುಪ್ರೀಂಕೋರ್ಟ್ ಹಿಂಪಡೆದಿದ್ದು, ವಿನಯ್ ಕುಲಕರ್ಣಿ ಸೇರಿದಂತೆ ಪ್ರಕರಣದ 12 ಮಂದಿ ಆರೋಪಿಗಳು ಮುಂದಿನ 14 ದಿನಗಳೊಳಗೆ ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಸುಪ್ರೀಂ ತೀರ್ಪಿನಿಂದ ಶಿಕ್ಷೆಗೆ ಇದ್ದ ತಡೆ ತೆರವಾಗಿದ್ದು, ನಿಯಮಗಳ ಪ್ರಕಾರ ಎರಡು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನವೂ ಅನರ್ಹಗೊಳ್ಳುವ ಆತಂಕ ಎದುರಾಗಿದೆ.

ಇತ್ತ ಸುಪ್ರೀಂಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆಯೇ ಡೈರಿಯಿಂದ ಡಿಫೆಂಡರ್ ಕಾರಿನಲ್ಲಿ ನೇರವಾಗಿ ಧಾರವಾಡದ ಶಿವಗಿರಿ ನಿವಾಸಕ್ಕೆ ಆಗಮಿಸಿದ ವಿನಯ್ ಕುಲಕರ್ಣಿ ತೀವ್ರ ಒತ್ತಡದಲ್ಲಿ ಕಂಡುಬಂದರು. ವಿಷಯ ತಿಳಿದು ಕೈ ಕಾರ್ಯಕರ್ತರು ಮತ್ತು ಅಭಿಮಾನಿಗಳು ನಿವಾಸದತ್ತ ದೌಡಾಯಿಸಿದರೂ ಯಾರ ಭೇಟಿಗೂ ಅವಕಾಶ ನೀಡಿರಲಿಲ್ಲ. ಸವದತ್ತಿಯಿಂದ ಆಗಮಿಸಿದ ಪತ್ನಿ ಶಿವಲೀಲಾ ಕುಲಕರ್ಣಿ ಅವರ ತಾಯಿ ಹಾಗೂ ಸಹೋದರ ವಿನಯ್ ಅವರನ್ನು ಭೇಟಿಯಾದರು. ಬಳಿಕ ವಕೀಲರೊಂದಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಗೌಪ್ಯ ಚರ್ಚೆ ನಡೆಸಿದ ವಿನಯ್, ಅಪರಾಧಿಗಳಾದ ವಿನಾಯಕ್ ಕಟ್ಟಿಗಿ ಹಾಗೂ ಸಂದೀಪ್ ಅವರೊಂದಿಗೂ ಮಾತುಕತೆ ನಡೆಸಿದರು. ನಂತರ ಗನ್ ಮ್ಯಾನ್‌ಗಳು ಕಾರಿನಲ್ಲಿ ಲಗೇಜ್ ಪ್ಯಾಕ್ ಮಾಡುತ್ತಿದ್ದಂತೆ, ಮನೆಯಿಂದ ಹೊರಬಂದ ವಿನಯ್ ಕುಲಕರ್ಣಿ ತಮ್ಮನ್ನು ತಬ್ಬಿಕೊಂಡು ಕಣ್ಣೀರಿಟ್ಟ ಕಾರ್ಯಕರ್ತರಿಗೆ ಕೈಮುಗಿದು, ತಾವೂ ಕಣ್ಣೀರು ಹಾಕುತ್ತಲೇ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

ಮತ್ತೊಂದೆಡೆ, ಸುಪ್ರೀಂಕೋರ್ಟ್ ತೀರ್ಪಿಗೆ ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಸಂತಸ ವ್ಯಕ್ತಪಡಿಸಿದ್ದು, “ಈ ಹೋರಾಟದಲ್ಲಿ ನಮಗೆ ಜಯ ಸಿಕ್ಕಿದೆ. ಭಾರತದ ಕಾನೂನಿನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಮುಂದಿನ ದಿನಗಳಲ್ಲಿ ಶಾಸಕರಾಗಿ ಕೊಲೆ ಮಾಡಿಸಿ ಮುಚ್ಚಿ ಹಾಕುವ ಮನಸ್ಥಿತಿ ಇದ್ದವರಿಗೆ ಇದೊಂದು ಒಳ್ಳೆಯ ಪಾಠ ಆಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಸಿಬಿಐ ದಾಖಲಿಸಿದ್ದ ಪ್ರಕರಣದ ದೂರುದಾರ ಗುರುನಾಥ ಗೌಡ ಪರ ವಕೀಲರು ಪ್ರತಿಕ್ರಿಯಿಸಿದ್ದು, ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ, ಆರೋಪಿಗಳು 14 ದಿನಗಳೊಳಗೆ ಶರಣಾಗುವಂತೆ ನಿರ್ದೇಶನ ನೀಡಿದೆ. ನ್ಯಾಯಾಲಯವು ಸದ್ಯ ಎರಡು ಸಾಲಿನ ಪ್ರಮುಖ ಆದೇಶವನ್ನು ಪ್ರಕಟಿಸಿದ್ದು, ವಿವರವಾದ ತೀರ್ಪಿನ ಪ್ರತಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಜೈಲಿನಿಂದ ಬಂದ ಬಳಿಕ ಎರಡು ತಿಂಗಳ ಹಿಂದೆ ಹಕ್ಕು ಪತ್ರ ವಿತರಣೆ ಸಮಾರಂಭದಲ್ಲಿ ವಿನಯ್ ಕುಲಕರ್ಣಿ ಭಾವನಾತ್ಮಕವಾಗಿ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. “ಅಧಿಕಾರ ಇರತೈತಿ, ಹೋಗತೈತಿ, ನಾವು ಮಾಡಿದ್ದ ಕೆಲಸ ಶಾಶ್ವತವಾಗಿ ಇರುತ್ತವೆ. ಎಂಎಲ್ಎ ಆಗೋದು ದೊಡ್ಡದಲ್ಲ, ಕೆಲಸ ಮಾಡೋದು ದೊಡ್ಡದು” ಎಂದು ವಿನಯ್ ಹೇಳಿದ್ದ ಮಾತುಗಳು ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿವೆ.

Tags:

error: Content is protected !!