Belagavi

ಬೆಳಗಾವಿಯಲ್ಲಿ ಮಾರ್ಕೆಟ್ ಠಾಣೆ ಪೊಲೀಸರ ಕಾರ್ಯಾಚರಣೆ: ಚಾಕು ಸಹಿತ ಓರ್ವ, ಮಟಕಾ ದಂಧೆಯ ಇಬ್ಬರು ಆರೋಪಿಗಳು ಬಂಧನ

Share

ಬೆಳಗಾವಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮಾರ್ಕೆಟ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಸೆಂಟ್ರಲ್ ಬಸ್ ನಿಲ್ದಾಣದ ಬಳಿ ಚಾಕು ಹಿಡಿದು ತಿರುಗಾಡುತ್ತಿದ್ದ ಓರ್ವನನ್ನು ಹಾಗೂ ಪ್ರತ್ಯೇಕ ಮಟಕಾ ಅಡ್ಡೆಗಳ ಮೇಲೆ ದಾಳಿ ನಡೆಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ದಿನಾಂಕ 24/11/2026 ರಂದು ಕಾನೂನು ಸುವ್ಯವಸ್ಥೆ ಮತ್ತು ಮುಂಜಾಗ್ರತಾ ಕ್ರಮವಾಗಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಂಟಿ ಸ್ಟ್ಯಾಬಿಂಗ್ ಸ್ಕ್ವಾಡ್ ತಂಡದಿಂದ ಪರಿಶೀಲನೆ ಕೈಗೊಳ್ಳಲಾಯಿತು. ಈ ವೇಳೆ ಸೆಂಟ್ರಲ್ ಬಸ್ ಸ್ಟ್ಯಾಂಡ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಹರಿತವಾದ ಚಾಕು ಇಟ್ಟುಕೊಂಡು ಅಪರಾಧಿಕ ಕೃತ್ಯವೆಸಗುವ ಉದ್ದೇಶದಿಂದ ಹೊರಟಿದ್ದ ಮಹಾದ್ವಾರ ರಸ್ತೆ, ಬೆಳಗಾವಿಯ ನಿವಾಸಿ ಮಯೂರ ಸುಭಾಷ ರಾವುತ (32) ಎಂಬಾತನನ್ನು ಮಾರ್ಕೆಟ್ ಠಾಣೆಯ ಪಿಎಸ್‌ಐ ಪಿ. ಜಿ. ಗಂಡವ್ವಗೊಳ ಹಾಗೂ ಸಿಬ್ಬಂದಿ ಚಾಕು ಸಮೇತ ವಶಕ್ಕೆ ಪಡೆದು, ಕಾನೂನು ಕ್ರಮ ಜರುಗಿಸಿದ್ದಾರೆ. ಇದೇ ವೇಳೆ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‌ಐ ಪಿ. ಜಿ. ಗಂಡವ್ವಗೊಳ ಮತ್ತು ಸಿಬ್ಬಂದಿ ರವಿವಾರ ಪೇಠೆಯ ಸಿದ್ದಾಮೇಶ್ವರ ಅಗ್ರೋ ಸೆಂಟರ್ ಎದುರಿಗೆ ಮಟಕಾ ಆಟದ ಮೇಲೆ ದಾಳಿ ನಡೆಸಿ, ಕಾಮತ ಗಲ್ಲಿ, ಬೆಳಗಾವಿಯ ನಿವಾಸಿ ಪಂಕಜ ಮೋಹನ ಜಾಧವ (34) ಎಂಬಾತನನ್ನು ಬಂಧಿಸಿ, ಆತನಿಂದ ರೂ. 1,250/- ನಗದು ಮತ್ತು ಓಸಿ ಚೀಟಿಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಕೊತ್ವಾಲ್ ಗಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಆಟದ ಮೇಲೆ ದಾಳಿ ನಡೆಸಿ, ಬಂಜರ ಗಲ್ಲಿ, ಬೆಳಗಾವಿಯ ನಿವಾಸಿ ಮುದ್ದಸ್ಸರ ಮೆಹಬೂಬ ದೇಸಾಯಿ (34) ಎಂಬಾತನನ್ನು ವಶಕ್ಕೆ ಪಡೆದು, ಆತನಿಂದ ರೂ. 2,340/- ನಗದು ಹಾಗೂ ಓಸಿ ಚೀಟಿಗಳನ್ನು ಜಪ್ತಿ ಮಾಡಿ, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. ಈ ಎಲ್ಲಾ ಕಾರ್ಯಾಚರಣೆ ಕೈಗೊಂಡ ಪಿಎಸ್‌ಐ ಪಿ. ಜಿ. ಗಂಡವ್ವಗೊಳ ಮತ್ತು ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಶ್ಲಾಘಿಸಿದ್ದಾರೆ.

Tags:

error: Content is protected !!