ಬೆಳಗಾವಿಯ ಹಲಗಾ-ಬಸ್ತವಾಡ ಸರ್ವೀಸ್ ರಸ್ತೆಯಲ್ಲಿ ಅತ್ಯಂತ ವಿಷಕಾರಿ ಕೊಳಕುಮಂಡಲ ಹಾವೊಂದು ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಸಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ಧಾವಿಸಿದ ಸರ್ಪಮಿತ್ರ ಭರತ್ ಹಬಾಜಿ ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ.
ಬೆಳಗಾವಿಯ ಹಲಗಾ-ಬಸ್ತವಾಡ ಸರ್ವೀಸ್ ರಸ್ತೆಯ ಬಳಿ ಶನಿವಾರ ರಾತ್ರಿ ಬೃಹತ್ ಗಾತ್ರದ ಕೊಳಕುಮಂಡಲ ಹಾವು ಪತ್ತೆಯಾಗಿದೆ. ಬಸ್ತವಾಡ ಕಡೆಗೆ ಕಾರ್ಮಿಕರು ಹೆಚ್ಚಾಗಿ ಸಂಚರಿಸುವ ಈ ಮಾರ್ಗದಲ್ಲಿ ಹಾವು ಕಾಣಿಸಿಕೊಂಡಿದ್ದರಿಂದ ಜನರ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇತ್ತು. ತಕ್ಷಣ ಎಚ್ಚೆತ್ತ ಸ್ಥಳೀಯರು ಯುವ ಸರ್ಪಮಿತ್ರ ಭರತ್ ಹಬಾಜಿ ಅವರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಆಗಮಿಸಿ ಹಾವನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಬಳಿಕ ಹಾವನ್ನು ಕಾಡಿಗೆ ಬಿಡಲು ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಚಳಿಗಾಲದ ಸಂತಾನೋತ್ಪತ್ತಿ ಅವಧಿಯಲ್ಲಿ ಕೊಳಕುಮಂಡಲ ಹಾವುಗಳು ಹೆಚ್ಚಾಗಿ ಹೊರಬರುತ್ತವೆ ಎಂದು ಸರ್ಪಮಿತ್ರ ಭರತ್ ಹಬಾಜಿ ತಿಳಿಸಿದ್ದಾರೆ. ಹೀಗಾಗಿ ರೈತರು ಮತ್ತು ಸಾರ್ವಜನಿಕರು ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ಹಾಗೂ ರಾತ್ರಿ ವೇಳೆ ಓಡಾಡುವಾಗ ಬೆಳಕಿನ ವ್ಯವಸ್ಥೆ ಬಳಸಬೇಕು, ಹುಲ್ಲು ಮತ್ತು ಪೊದೆಗಳ ಬಳಿ ಎಚ್ಚರದಿಂದಿರಬೇಕು ಎಂದು ಮನವಿ ಮಾಡಿದ್ದಾರೆ. ಹಾವು ಕಂಡರೆ ಅದನ್ನು ಕೊಲ್ಲುವ ಅಥವಾ ತಾವೇ ಹಿಡಿಯುವ ಸಾಹಸಕ್ಕೆ ಕೈಹಾಕದೆ ಕೂಡಲೇ ಸರ್ಪಮಿತ್ರರಿಗೆ ಕರೆ ಮಾಡುವಂತೆ ಸಲಹೆ ನೀಡಿದ್ದಾರೆ.
