ವಿಶ್ವಗುರು ಬಸವಣ್ಣನವರ ಬಗ್ಗೆ ರವಿ ಹಂಜ್ ನೀಡಿರುವ ಅವಹೇಳನಕಾರಿ ಹೇಳಿಕೆಗೆ ಕೂಡಲಸಂಗಮ ಬಸವ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸವಣ್ಣನವರ ಕುರಿತು ಇಂತಹ ಮಾತುಗಳನ್ನು ಬಸವಪರ ಸಂಘಟನೆಗಳು ಎಂದಿಗೂ ಸಹಿಸುವುದಿಲ್ಲ ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿಶ್ವಗುರು ಬಸವಣ್ಣನವರ ಬಗ್ಗೆ ರವಿ ಹಂಜ್ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿರುವ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಬಸವ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರವಿ ಹಂಜ್ ಬಳಸಿರುವ ಭಾಷೆಯಿಂದ ಮನಸ್ಸಿಗೆ ತೀವ್ರ ನೋವಾಗಿದ್ದು, ಇಂತಹ ಅವಹೇಳನಕಾರಿ ಮಾತುಗಳನ್ನು ಬಸವಪರ ಸಂಘಟನೆಗಳು ಸಹಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ. ಮಲಗಿದ ಸಿಂಹವನ್ನು ಎಬ್ಬಿಸುವಂತಹ ಕೆಲಸವನ್ನು ಅವರು ಮಾಡಿದ್ದು, ಗುರುವಿನ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು; ಒಂದು ವೇಳೆ ಇದೇ ರೀತಿ ಮುಂದುವರೆದರೆ ಬಸವಪರ ಸಂಘಟನೆಗಳೆಲ್ಲ ಒಟ್ಟಾಗಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಮಾತೆ ಗಂಗಾದೇವಿ ಎಚ್ಚರಿಕೆ ನೀಡಿದ್ದಾರೆ.
