ಹೋಮ್ ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕೆ 2ನೇ ತರಗತಿ ವಿದ್ಯಾರ್ಥಿ ಮೇಲೆ ಶಿಕ್ಷಕರು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಾಯಗೊಂಡ ವಿದ್ಯಾರ್ಥಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಲ್ಲೆಗೊಳಗಾದ ವಿದ್ಯಾರ್ಥಿ ಆರೋಗ್ಯ ವಿಚಾರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಶಿಕ್ಷಣ ಹಾಗೂ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ…

ಒಂದೆಡೆ ಶಿಕ್ಷಕರಿಂದ ಥಳಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರೋ ವಿದ್ಯಾರ್ಥಿ. ಮತ್ತೊಂದೆಡೆ ಥಳಿಸಿದ ಶಾಲಾ ಶಿಕ್ಷಕರಿಬ್ಬರ ವಿರುದ್ಧ ದೂರು ನೀಡ್ತಿರೋ ಹಲ್ಲೆಗೊಳಗಾದ ಬಾಲಕ ಮತ್ತು ಪಾಲಕರು. ಇನ್ನೊಂದೆಡೆ ಕೈ-ಕಾಲುಗಳ ಮೇಲೆ ಉತಿರೋ ಬಾಸುಂಡೆಗಳು.ಇಂತಹ ಘಟನೆ ನಡೆದಿದ್ದು ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲ್ಲೂಕಿನ ರಾಣಿ ಚನ್ನಮ್ಮ ಪ್ರಾಥಮಿಕ ಶಾಲೆಯಲ್ಲಿ. ಹೌದು ಶಾಲೆಯ ೨ನೇ ತರಗತಿ ವಿದ್ಯಾರ್ಥಿ ಶ್ರೇಯಸ್ ಆಸಂಗಿ ಹೋಮ್ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಶಾಲೆಯ ಶಿಕ್ಷಕಿ ವಿಜಯಲಕ್ಷ್ಮೀ ಹಾಗೂ ಮುಖ್ಯ ಶಿಕ್ಷಕ ಅಂಬಿ ಇಬ್ಬರು ಸೇರಿ ವಿದ್ಯಾರ್ಥಿ ಮೇಲೆ ಮನಸೋ ಇಚ್ಚೆ ಥಳಿಸಿದ್ದು,ವಿದ್ಯಾರ್ಥಿ ಕೈ-ಕಾಲುಗಳ ಮೇಲೆ ಬಾಸುಂಡೆ ಮೂಡಿವೆ.ಅಲ್ಲದೆ ಥಳಿತದ ಪರಿಣಾಮ ವಿದ್ಯಾರ್ಥಿಗೆ ತೀವ್ರ ಜ್ವರ ಬಂದಿದ್ದು ಜಮಖಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿ ಹಾಗೂ ಪಾಲಕರು ದೂರು ನೀಡಿದ್ದಾರೆ…
ಇನ್ನು ಮೈಮೇಲೆ ಬಾಸುಂಡೆ ಬರುವ ರೀತಿ, ರಕ್ತ ಹೆಪ್ಪುಗಟ್ಟುವ ರೀತಿಯಲ್ಲಿ ಅಮಾನುಷವಾಗಿ ಶಿಕ್ಷಕರು ಹಲ್ಲೆ ಮಾಡಿರೋದಕ್ಕೆ ವಿದ್ಯಾರ್ಥಿ ಸಂಬಂಧಿಕರು ಅಸಮಧಾನ ವ್ಯಕ್ತಪಡಿಸಿದ್ದು. ಈ ಸಂಬಂಧ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣದ ಕುರಿತು ಪೊಲೀಸರಿಗೆ ಸ್ವತಃ ಥಳಿತಕ್ಕೊಳಗಾದ ವಿದ್ಯಾರ್ಥಿಯಿಂದ ಮಾಹಿತಿ ಪಡೆದಿದ್ದು, ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ.ಅಲ್ಲದೆ ಘಟನೆ ನಡೆದು ಒಂದು ದಿನ ಕಳೆದ್ರೂ ಶಿಕ್ಷಣ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು, ವಿದ್ಯಾರ್ಥಿ ಪಾಲಕರ ಆಕ್ರೋಶ ಕಾರಣವಾಗಿದೆ.
ಒಟ್ಟಿನಲ್ಲಿ ರಾಣಿ ಚನ್ನಮ್ಮ ಖಾಸಗಿ ಶಾಲೆಯ ಶಿಕ್ಷಕರಿಬ್ಬರು ಸೇರಿ ವಿದ್ಯಾರ್ಥಿ ಹೋಮ್ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಮನಸೋ ಇಚ್ಚೆ ಥಳಿಸಿದ್ದು, ಹಲ್ಲೆ ನಡೆಸಿದವ್ರ ವಿರುದ್ಧ ಕ್ರಮಕ್ಕೆ ವಿದ್ಯಾರ್ಥಿ ಪಾಲಕರು ಆಗ್ರಹಿಸಿದ್ದಾರೆ.
