State

KPSC ಅಕ್ರಮ ತಡೆಗೆ ವಿಶೇಷ ಸಮಿತಿ ರಚನೆ

Share

KPSC ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ವಿಶೇಷ ಸಮಿತಿ ರಚಿಸಲಾಗುವುದು. ಇನ್ನು ನಾಳೆ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜತೆ ಮಹತ್ವದ ಸಭೆ ನಡೆಸಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಭಾನುವಾರ ಜೈನ ಸಮುದಾಯದ ಬೃಹತ್ ಧಾರ್ಮಿಕ ಸಮಾವೇಶ ಹಾಗೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜೈನ ಮುನಿಗಳು ಹಾಗೂ ಸಮುದಾಯದ ಗಣ್ಯರ ಆಶೀರ್ವಾದ ಪಡೆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಮುದಾಯದ ಶಾಂತಿ, ಸೌಹಾರ್ದತೆ ಮತ್ತು ಧಾರ್ಮಿಕ ಚಿಂತನೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, KPSC ಪರೀಕ್ಷೆ ಹಾಗೂ ಉದ್ಯೋಗ ನೇಮಕಾತಿ ಕುರಿತು ಪ್ರಮುಖ ನಿರ್ಧಾರ ಪ್ರಕಟಿಸಿದರು. ಹೊಸಬರು ಮತ್ತು ಯುವಕರು ಬಹಳ ಶ್ರಮವಹಿಸಿ ಓದಿರುತ್ತಾರೆ, ಇಂತಹ ಪರೀಕ್ಷೆಗಳಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಅಥವಾ ಪ್ರಭಾವ ಬೀರುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು. ಪರೀಕ್ಷಾ ಪದ್ಧತಿಯಲ್ಲಿ ಪಾರದರ್ಶಕತೆ ಕಾಪಾಡಲು ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿ ರಚಿಸಲಾಗಿದ್ದು, ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಮಾರ್ಗದರ್ಶನದಂತೆ ಶಿಕ್ಷಣ ಸುಧಾರಣೆ ತರಲಾಗುವುದು ಎಂದರು.

ಇದೇ ವೇಳೆ ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಮಾತನಾಡಿದ ಡಿಸಿಎಂ, ನಾಳೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಪ್ರಮುಖ ಸಭೆ ಕರೆಯಲಾಗಿದೆ ಎಂದು ತಿಳಿಸಿದರು. ಮೊದಲು ರೈತರ ಹಿತಾಸಕ್ತಿ ಹಾಗೂ ಅವರ ಅಹವಾಲುಗಳನ್ನು ಆಲಿಸಿ, ಬಳಿಕ ಕಾರ್ಖಾನೆ ಮಾಲೀಕರ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರ ಎಂದಿಗೂ ಅನ್ನದಾತ ರೈತರ ಪರವಾಗಿ ಗಟ್ಟಿಯಾಗಿ ನಿಲ್ಲಲಿದೆ ಎಂದು ಅವರು ಭರವಸೆ ನೀಡಿದರು.

Tags:

error: Content is protected !!