Belagavi

ಮತದಾರರ ಹೆಸರು ಡಿಲೀಟ್ ಮಾಡಿರುವುದು ಇಡೀ ದೇಶಕ್ಕೇ ಎಸಗಿದ ಗಂಭೀರ ವಂಚನೆ

Share

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ತಿರುಚುವಿಕೆ ಹಾಗೂ ನಕಲಿ ಮತದಾರರ ಸೇರ್ಪಡೆ ಪ್ರಕರಣ ಕಾವೇರಿದೆ. ಶಾಸಕ ಆಸಿಫ್ ಸೇಠ್ ಅವರು ಬಿಜೆಪಿ ಮುಖಂಡರ ವಿರುದ್ಧ ಚುನಾವಣಾ ಅಕ್ರಮ ಎಸಗಿದ ಆರೋಪ ಹೊರಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಡಿಜಿಪಿಯವರಿಗೆ ದೂರು ಸಲ್ಲಿಸಿರುವುದಾಗಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ಮತದಾರರ ಪಟ್ಟಿಯಲ್ಲಿ ಭಾರಿ ಪ್ರಮಾಣದ ಅಕ್ರಮ ಮತ್ತು ವಂಚನೆ ನಡೆದಿದೆ ಎಂದು ಮಾಧ್ಯಮಗಳ ಮುಂದೆ ವಾಗ್ದಾಳಿ ನಡೆಸಿದ್ದಾರೆ. ಮ್ಯಾಪಿಂಗ್ ಪ್ರಕ್ರಿಯೆಯ ಹೆಸರಿನಲ್ಲಿ ಶಾಸನಬದ್ಧವಾಗಿ ಅರ್ಹರಿರುವ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಡಿಲೀಟ್ ಮಾಡಲು ಯತ್ನಿಸಲಾಗಿದ್ದು, ಇದು ಮತದಾರರಿಗೆ ಹಾಗೂ ಇಡೀ ದೇಶಕ್ಕೇ ಎಸಗಿದ ಗಂಭೀರ ವಂಚನೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಚೌಹಾಣ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಮುಖಂಡರು ಅಳಿಸಿಹಾಕಲಾದ ಹೆಸರುಗಳು ಮತ್ತು ಫೋಟೋಗಳ ಕೂಲಂಕಷ ಪರಿಶೀಲನೆ ನಡೆಸುತ್ತಿದ್ದಾರೆ. ಮುಖ್ಯವಾಗಿ, ಒಂದೇ ಸಿಟಿಸಿ ಅಥವಾ ಸರ್ವೇ ನಂಬರ್ (ಉದಾಹರಣೆಗೆ 2436 ಅಥವಾ ಸ್ಲಮ್ ಪ್ರದೇಶಗಳಲ್ಲಿ) ಅಡಿಯಲ್ಲಿ 260ಕ್ಕೂ ಹೆಚ್ಚು ನಕಲಿ ಮತದಾರರ ಹೆಸರುಗಳನ್ನು ನಮೂದಿಸಿರುವುದು ಭಾರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದಷ್ಟೇ ಅಲ್ಲದೆ, ಸೆಪ್ಟೆಂಬರ್ 24ರಂದು ಬಿಎಲ್ಒ (BLO) ಸ್ಟೇಟಸ್ ದುರ್ಬಳಕೆ ಮಾಡಿಕೊಂಡು, ಬಲವಂತವಾಗಿ ಫೋನ್ ಕರೆಗಳ ಮೂಲಕ ಭಯ ಹುಟ್ಟಿಸಿ ಹೆಸರುಗಳನ್ನು ತೆಗೆದುಹಾಕಲು ಉದಯಕುಮಾರ್ ಎಂಬುವವರ ನಿರ್ದೇಶನದಂತೆ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಿದರು. ಈ ಎಲ್ಲಾ ಅಕ್ರಮ ಹಾಗೂ ಫ್ರಾಡ್ ಯತ್ನಗಳ ವಿರುದ್ಧ ಈಗಾಗಲೇ ಜಿಲ್ಲಾಧಿಕಾರಿಗಳು (DEO) ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ (DGP) ದೂರು ನೀಡಿ ಎಫ್‌ಐಆರ್ ದಾಖಲಿಸಲಾಗಿದ್ದು, ಚುನಾವಣಾ ಆಯೋಗಕ್ಕೂ ಸಮಗ್ರ ವರದಿ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಜ ಸಲೀಂ ಕಾಶಮ್ಮನವರ್ ಅವರು 2014 ರಿಂದ ಬಿಜೆಪಿ ಅವರು ಯಾವಾಗಲೂ ವೋಟ್ ಚೋರಿ ಮಾಡಿ ಅಥವಾ ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬರುತ್ತಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಶಾಸಕರು ತಮ್ಮ ಲೆಟರ್ ಹೆಡ್ ಮೇಲೆ 2,598ಕ್ಕೂ ಹೆಚ್ಚು ಮತಗಳು ನಕಲಿ (ಡ್ಯೂಪ್ಲಿಕೇಟ್) ಇವೆ ಎಂದು ಬರೆದುಕೊಟ್ಟು ಅವುಗಳನ್ನು ಡಿಲೀಟ್ ಮಾಡಲು ತಿಳಿಸಿರುವುದು ದಲಿತರು, ಅಲ್ಪಸಂಖ್ಯಾತರು ಹಾಗೂ ಕೆಳವರ್ಗದ ಜನರ ಮತಗಳನ್ನು ತೆಗೆದುಹಾಕುವ ಉದ್ದೇಶದಿಂದ ಮಾಡಿರುವ ಅಸಂವಿಧಾನಿಕ ಯತ್ನವಾಗಿದೆ. ಇದರ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಹೋರಾಟ ನಡೆಸಲಾಗಿದ್ದು, ಹೇಗಾದರೂ ಮಾಡಿ ಚುನಾವಣೆ ಗೆಲ್ಲಲು ಮಾಡುವ ಈ ‘ವೋಟ್ ಚೋರಿ’ ಕುರಿತು ಸೂಕ್ತ ತನಿಖೆ ನಡೆಯಬೇಕು ಮತ್ತು ಕಾಂಗ್ರೆಸ್ ಪಕ್ಷದಿಂದ ದಿನದಿಂದ ದಿನಕ್ಕೆ ಭಾರೀ ಹೋರಾಟ ರೂಪಿಸುವ ಬಗ್ಗೆ ಅವರು ಸ್ಪಷ್ಟಪಡಿಸಿದ್ದಾರೆ.

Tags:

error: Content is protected !!