ಬೆಳಗಾವಿಯ 58ನೇ ಫ್ರೇ ಎಡ್ಡಿ ಮೆಮೋರಿಯಲ್ ಅಂತರ-ಶಾಲಾ ಬಾಲಕರ ಫುಟ್ಬಾಲ್ ಹಾಗೂ 2ನೇ ಆವೃತ್ತಿಯ ನಿಶಾ ಛಾಬ್ರಿಯಾ ಮೆಮೋರಿಯಲ್ ಬಾಲಕಿಯರ ಫುಟ್ಬಾಲ್ ಟೂರ್ನಮೆಂಟ್ಗೆ ಅತ್ಯಂತ ವಿಜೃಂಭಣೆಯಿಂದ ಚಾಲನೆ ಸಿಕ್ಕಿದೆ. ಮೆಟ್ರೋಕಾಸ್ಟ್ರ ಇಂಡಿಯಾ ಸಂಸ್ಥೆಯ ನಾಗೇಶ್ ಛಾಬ್ರಿಯಾ ಅವರು ಗೋಲ್ ಬಾರಿಸುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದ್ದು, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಬಲ್ಲರು ಎಂದು ರಿದ್ಧಿ ಛಾಬ್ರಿಯಾ ಆಶಯ ವ್ಯಕ್ತಪಡಿಸಿದ್ದಾರೆ.


ಬೆಳಗಾವಿಯ ಸೇಂಟ್ ಪಾಲ್ಸ್ ಪಿಯು ಕಾಲೇಜು ಮೈದಾನದಲ್ಲಿ ಸೇಂಟ್ ಪಾಲ್ಸ್ ಹೈಸ್ಕೂಲ್ ಹಾಗೂ ಪೌಲೈಟ್ಸ್ ಆಫ್ ಬೆಳಗಾಂ ವರ್ಲ್ಡ್ವೈಡ್ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ ಪ್ರತಿಷ್ಠಿತ ಟೂರ್ನಿಯ ಆರಂಭಿಕ ದಿನ ಕ್ರೀಡಾಪಟುಗಳ ಉತ್ಸಾಹ ಮುಗಿಲು ಮುಟ್ಟಿತ್ತು. ಈ ವೇಳೆ ಮೆಟ್ರೋಕಾಸ್ಟ್ರ ಇಂಡಿಯಾ ಪ್ರೈವೇಟ್
ಲಿಮಿಟೆಡ್’ನ ಪ್ರಮುಖರಾದ ನಾಗೇಶ್ ಛಾಬ್ರಿಯಾ ಅವರು ಪೂಟ್’ಬಾಲ್ ಗೋಲ್ ಮಾಡುವ ಮೂಲಕ ಟೂರ್ನಾಮೆಂಟ್’ಗೆ ಚಾಲನೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಿದ್ಧಿ ಛಾಬ್ರಿಯಾ ಅವರು ತಮ್ಮ ಶಾಲಾ ದಿನಗಳನ್ನು ಸ್ಮರಿಸುತ್ತಾ, ತಮ್ಮ ತಾಯಿ ನಿಶಾ ಛಾಬ್ರಿಯಾ ಅವರ ನೆನಪಿನಲ್ಲಿ ಬಾಲಕಿಯರ ಫುಟ್ಬಾಲ್ ಟೂರ್ನಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು. ‘ಮಹಿಳೆಯರು ಏನು ಬೇಕಾದರೂ ಸಾಧಿಸಬಲ್ಲರು’ ಎಂಬುದು ತಮ್ಮ ತಾಯಿಯ ದೃಢ ವಿಶ್ವಾಸವಾಗಿತ್ತು ಎಂದ ಅವರು, ವಿದ್ಯಾರ್ಥಿನಿಯರು ಈ ಅವಕಾಶವನ್ನು ಬಳಸಿಕೊಂಡು ಮೈದಾನದಲ್ಲಿ ಬೆಳೆದು ನಗರಕ್ಕೆ ಹೆಮ್ಮೆ ತರಬೇಕು ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿದ್ದ ಡಾ. ಮಾಧವ್ ಪ್ರಭು ಅವರು ಮಾತನಾಡಿ, ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ನಾಗೇಶ್ ಛಾಬ್ರಿಯಾ ಹಾಗೂ ಅವರ ಕುಟುಂಬವು ಕ್ರೀಡಾಕೂಟಕ್ಕೆ ನೀಡುತ್ತಿರುವ ನಿರಂತರ ಬೆಂಬಲವನ್ನು ಶ್ಲಾಘಿಸಿದರು. ದಿವಂಗತ ನಿಶಾ ಛಾಬ್ರಿಯಾ ಅವರ ನೆನಪುಗಳನ್ನು ಚಿರಸ್ಮರಣೀಯವಾಗಿಡಲು ಈ ‘ನಿಶಾ ಮೆಮೋರಿಯಲ್ ಕಪ್’ ಅನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಮಾತನಾಡಿದ ಕಿತ್ತೂರು ಕುಟುಂಬದವರು ಹಾಗೂ ಹಿರಿಯ ಶಿಕ್ಷಕಿಯರು, ಕ್ರೀಡೆಯು ಕೇವಲ ಮನರಂಜನೆಯಲ್ಲದೆ ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಪೂರ್ತಿ, ತಾಳ್ಮೆ, ಪರಿಶ್ರಮ ಮತ್ತು ಲಿಂಗ ಸಮಾನತೆಯನ್ನು ಮೂಡಿಸುತ್ತದೆ ಎಂದು ಹೇಳಿದರು. ಈ ಆವೃತ್ತಿಯಲ್ಲಿ ಬಾಲಕಿಯರ ವಿಭಾಗದಿಂದ 14 ಪ್ರಮುಖ ತಂಡಗಳು ಭಾಗವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿವಿಧ ಶಾಲೆಗಳ ಪ್ರಮುಖ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸುತ್ತಿದ್ದು, ಉದ್ಘಾಟನಾ ಸಮಾರಂಭದಲ್ಲಿ ಹಲವು ಗಣ್ಯರು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.
