ರಾಜ್ಯದಲ್ಲಿ ಬರಗಾಲದ ಛಾಯೆ ದಿನದಿಂದ ದಿನಕ್ಕೆ ಆಳವಾಗುತ್ತಿದ್ದು, ಅನ್ನದಾತನ ಬದುಕು ಮೂರಾಬಟ್ಟೆಯಾಗಿದೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯನ್ನು ನೇರವಾಗಿ ಅವಲೋಕಿಸಿರುವ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ರಾಜ್ಯದಲ್ಲಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿರುವುದನ್ನು ಪರಿಗಣಿಸಲಾಗಿದ್ದು, ಸರ್ಕಾರದಿಂದ ಈಗಾಗಲೇ 306 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ವೈಫಲ್ಯದಿಂದಾಗಿ ಬರದ ಪರಿಸ್ಥಿತಿ ಅತ್ಯಂತ ಗಂಭೀರ ಸ್ವರೂಪ ಪಡೆದುಕೊಂಡಿದೆ. ಅದರಲ್ಲೂ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದ್ದು, ರಾಜ್ಯದ ಒಟ್ಟು ಶೇಕಡಾ 90 ರಷ್ಟು ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ ಎಂದು ಡಿಸಿಎಂ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಹೊಲಗಳಲ್ಲಿ ಬಿತ್ತಿದ ಬೆಳೆ ರೈತನ ಕೈ ಸೇರದೆ ಇರುವುದರಿಂದ ಅನ್ನದಾತ ಕಂಗಾಲಾಗಿದ್ದಾನೆ. ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ಸಹ ತತ್ವಾರ ಉಂಟಾಗಿದ್ದು, ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರದಿಂದ ಈಗಾಗಲೇ 306 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ರೈತರ ಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಮೊದಲ ಹಂತವಾಗಿ ಕನಿಷ್ಠ ಖರ್ಚು-ವೆಚ್ಚಗಳ ನಿರ್ವಹಣೆಗೆ ಪ್ರತಿ ರೈತನಿಗೆ 2500 ರೂಪಾಯಿಗಳ ಪರಿಹಾರ ಧನವನ್ನು ನೇರವಾಗಿ ಒದಗಿಸಿದೆ. ಇದರ ಜೊತೆಗೆ ಗ್ಯಾರಂಟಿ ಯೋಜನೆಗಳು ಹಾಗೂ ಇತರೆ ಜನಪರ ಕಾರ್ಯಕ್ರಮಗಳ ಮೂಲಕ ತಲಾ 20 ಸಾವಿರ ರೂಪಾಯಿಯವರೆಗೆ ಆರ್ಥಿಕ ನೆರವು ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಪ್ರಸ್ತುತ ತುರ್ತು ಪರಿಸ್ಥಿತಿಯಲ್ಲಿ ಹೊಸ ರಸ್ತೆ ನಿರ್ಮಾಣ ಅಥವಾ ಅಭಿವೃದ್ಧಿ ಕಾಮಗಾರಿಗಳಿಗಿಂತ ರೈತರ ಹಿತಾಸಕ್ತಿಯೇ ನಮ್ಮ ಸರ್ಕಾರದ ಪ್ರಥಮ ಆದ್ಯತೆಯಾಗಿದೆ ಎಂದು ಡಿಸಿಎಂ ಪುನರುಚ್ಚರಿಸಿದ್ದಾರೆ.ಬೈಟ್
ರಾಜ್ಯದಲ್ಲಿ ಉಂಟಾಗಿರುವ ಒಟ್ಟು 46 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟದ ಪೈಕಿ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ 10 ರಿಂದ 11 ಸಾವಿರ ಕೋಟಿ ರೂಪಾಯಿ ಪರಿಹಾರ ಕೋರಿ ಈಗಾಗಲೇ ಎರಡು ಪ್ರತ್ಯೇಕ ಮನವಿ ಪತ್ರಗಳನ್ನು (ಮೆಮೋರಂಡಮ್) ಕೇಂದ್ರಕ್ಕೆ ಸಲ್ಲಿಸಲಾಗಿದೆ. ಇನ್ನು ಸಚಿವರ ಸ್ಟಿಂಗ್ ಆಪರೇಷನ್ ವಿಚಾರವಾಗಿ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಗೆ ಗುಪ್ತಚರ ಇಲಾಖೆಯಿಂದ ನಿಖರವಾದ ಮಾಹಿತಿ ಲಭ್ಯವಿರುತ್ತದೆ, ಹೀಗಾಗಿ ಸಿಎಂ ಎಚ್ಚರಿಕೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆಯಾಗಿರುವುದು ನಿಜವಾದರೂ, ನುಡಿದಂತೆ ನಡೆಯುವ ಬದ್ಧತೆಯೊಂದಿಗೆ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
