ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರ ಮೈಸೂರಿನ ಬೈಲಕುಪ್ಪೆ ಭೇಟಿಯ ಹಿನ್ನೆಲೆಯಲ್ಲಿ, ಟಿಬೆಟಿಯನ್ ಕೇಂದ್ರ ಆಡಳಿತದ ಪ್ರಮುಖರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಈ ಭೇಟಿಯ ವೇಳೆ ಭದ್ರತೆ ಮತ್ತು ಸಿದ್ಧತೆಗಳ ಕುರಿತು ಚರ್ಚೆ ನಡೆದಿದೆ.


ಬೆಂಗಳೂರಿನ ಗೃಹಕಚೇರಿ ‘ಕೃಷ್ಣಾ’ದಲ್ಲಿ ಶನಿವಾರ ಟಿಬೆಟಿಯನ್ ಕೇಂದ್ರ ಆಡಳಿತದ ಬೆಂಗಳೂರಿನ ಮುಖ್ಯಪ್ರತಿನಿಧಿ ಜಿಗ್ಮೆ ಸುಲ್ಟ್ರಿಮ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಪೂರ್ವಭಾವಿ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಬೈಲಕುಪ್ಪೆಯ ಆಡಳಿತಾಧಿಕಾರಿ ಗವಾಂಗ್ ತೆಂಜಿನ್, ಪಿಆರ್ಒ ಕುಂಗಾ ಯೆಶಿ, ಲಂಪೊ ವಿಹಾರದ ಆಡಳಿತಾಧಿಕಾರಿ ಕಛೇನ್ ಲೋಬ್ಸಾಂಗ್ ಸೆತನ್, ಪ್ರಧಾನ ಕಾರ್ಯದರ್ಶಿ ನವಾಂಗ್ ಲೋಬ್ಸಾಂಗ್ ಹಾಗೂ ತೆಂಜಿನ್ ನೊರ್ಗ್ಯಾಲ್ ಉಪಸ್ಥಿತರಿದ್ದು, ದಲೈ ಲಾಮಾ ಅವರ ಭೇಟಿಯ ವ್ಯವಸ್ಥೆಗಳ ಕುರಿತು ಚರ್ಚಿಸಿದರು.

