Vijaypura

ಸಿದ್ದೇಶ್ವರ ಬ್ಯಾಂಕ್‌ನಲ್ಲಿ ನಿರ್ದೇಶಕರ ಚುನಾವಣೆ ವಿವಾದ: 13 ಮಂದಿಗೆ ಸಂಕಷ್ಟ

Share

ವಿಜಯಪುರದ ಪ್ರತಿಷ್ಠಿತ ಸಿದ್ದೇಶ್ವರ ಸಹಕಾರಿ ಬ್ಯಾಂಕ್‌ನಲ್ಲಿ ನಿರ್ದೇಶಕರ ಅರ್ಹತೆ ವಿಚಾರ ಇದೀಗ ಕಾನೂನು ಸಮರಕ್ಕೆ ತಿರುಗಿದೆ. ಬ್ಯಾಂಕಿನ 19 ನಿರ್ದೇಶಕರ ಪೈಕಿ 13 ಮಂದಿ ನಿರ್ದೇಶಕರು ಹೊಸ ಬ್ಯಾಂಕಿಂಗ್ ನಿಯಮಗಳ ಅನ್ವಯ ಅನರ್ಹರಾಗುತ್ತಾರೆ ಎಂದು ಆರೋಪಿಸಿ, ಬ್ಯಾಂಕ್ ಸದಸ್ಯರು ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠದ ಮೊರೆ ಹೋಗಿದ್ದಾರೆ. ಇದರ ಬೆನ್ನಲ್ಲೇ, ಇದೇ ಸಂದರ್ಭದಲ್ಲಿ 60 ಸಿಬ್ಬಂದಿ ನೇಮಕಾತಿಗೆ ಆಡಳಿತ ಮಂಡಳಿ ಮುಂದಾಗಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಇಲ್ಲಿದೆ ಒಂದು ವರದಿ‌..

ಹೌದು…ವಿಜಯಪುರ ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ 2025ರ ತಿದ್ದುಪಡಿ ಅನ್ವಯ, ಸಹಕಾರಿ ಬ್ಯಾಂಕ್‌ಗಳಲ್ಲಿ ನಿರ್ದೇಶಕರು ನಿರಂತರವಾಗಿ 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ನಿರ್ದೇಶಕರಾಗಿ ಮುಂದುವರಿಯಲು ಅವಕಾಶವಿಲ್ಲ ಎಂಬುದು ಅರ್ಜಿದಾರರ ವಾದವಾಗಿದೆ. ಈ ತಿದ್ದುಪಡಿ ಜಾರಿಯಾದ ಬಳಿಕವೂ ಸಿದ್ದೇಶ್ವರ ಸಹಕಾರಿ ಬ್ಯಾಂಕ್‌ನ 19 ನಿರ್ದೇಶಕರ ಸ್ಥಾನಗಳಿಗೆ 12 ಅಕ್ಟೋಬರ್ 2025ರಂದು ಚುನಾವಣೆ ನಡೆಸಲಾಗಿದ್ದು, 13 ನಿರ್ದೇಶಕರ ಆಯ್ಕೆ ನಿಯಮಬಾಹಿರವಾಗಿದೆ ಎಂದು ಸದಸ್ಯರು ಆರೋಪಿಸಿದ್ದಾರೆ.
ಈ ಸಂಬಂಧ ಚುನಾವಣಾಧಿಕಾರಿ ಹಾಗೂ ಬ್ಯಾಂಕ್‌ನ ಜಿ.ಎಂ. ವಿರುದ್ಧವೂ ನಿಯಮ ಉಲ್ಲಂಘನೆಯ ಆರೋಪ ಮಾಡಲಾಗಿದೆ.

ಇದೀಗ ನಿರ್ದೇಶಕರ ಅರ್ಹತೆ ಪ್ರಶ್ನೆಯ ನಡುವೆಯೇ 60 ಸಿಬ್ಬಂದಿ ನೇಮಕಾತಿಗೆ ಸಿದ್ಧತೆ ನಡೆಸಿರುವುದು ವಿವಾದಕ್ಕೆ ಮತ್ತಷ್ಟು ಕಾರಣವಾಗಿದೆ. ಬ್ಯಾಂಕ್ ಸದಸ್ಯ ಭೀಮನಗೌಡ ಬಿರಾದಾರ ಸೇರಿದಂತೆ ಇತರೆ ಸದಸ್ಯರು 13 ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ರಿಟ್ ಅರ್ಜಿ ಸಂಖ್ಯೆ 203082/2026 ಸಲ್ಲಿಸಿದ್ದಾರೆ. ಇದರ ಜೊತೆಗೆ, 60 ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಗೆ ತಡೆಯಾಜ್ಞೆ ಕೋರಿ ರಿಟ್ ಅರ್ಜಿ ಸಂಖ್ಯೆ 203909/2026 ಕೂಡ ಸಲ್ಲಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯು ಮೊದಲ ಪ್ರಕರಣದ ಅಂತಿಮ ತೀರ್ಪಿಗೆ ಒಳಪಟ್ಟಿರಲಿದೆ ಎಂದು ಮಧ್ಯಂತರ ಆದೇಶದಲ್ಲಿ ತಿಳಿಸಲಾಗಿದೆ.

ಒಟ್ಟಿನಲ್ಲಿ, ಸಿದ್ದೇಶ್ವರ ಸಹಕಾರಿ ಬ್ಯಾಂಕ್‌ನ 13 ನಿರ್ದೇಶಕರ ಅರ್ಹತೆ ಹಾಗೂ 60 ಸಿಬ್ಬಂದಿ ನೇಮಕಾತಿ ವಿಚಾರ ಹೈಕೋರ್ಟ್ ಮೆಟ್ಟಿಲೇರಿದ್ದು, ಇದೀಗ ನ್ಯಾಯಾಲಯದ ಮುಂದಿನ ವಿಚಾರಣೆಯತ್ತ ಎಲ್ಲರ ಗಮನ ನೆಟ್ಟಿದೆ. ನಿರ್ದೇಶಕರ ಅರ್ಹತೆ ಕುರಿತ ವಿವಾದಕ್ಕೆ ಯಾವ ರೀತಿಯ ಕಾನೂನು ತೀರ್ಮಾನ ಸಿಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ.

ವಿಜಯಕುಮಾರ ಸಾರವಾಡ,
ಇನ್ ನ್ಯೂಜ್,
ವಿಜಯಪುರ.

Tags:

error: Content is protected !!