ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ ಘಟನೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ನಡೆದಿದೆ.

ಹಳಿಯಾಳದಿಂದ ಬೆಳಗಾವಿಗೆ ಬರುತ್ತಿದ್ದ ಬಸ್‌ನಲ್ಲಿ ಕಕ್ಕೇರಿಯಿಂದ ಮಹಿಳೆಯೊಬ್ಬರು ತಮ್ಮ ಕುಟುಂಬದವರೊಂದಿಗೆ ಪ್ರಯಾಣಿಸುತ್ತಿದ್ದರು. ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಬಸ್‌ನಿಂದ ಕೆಳಗಿಳಿಯುವ ಸಂದರ್ಭದಲ್ಲಿ ದಾರಿ ಬಿಡುವ ವಿಚಾರಕ್ಕೆ ಮಹಿಳೆ ಹಾಗೂ ವ್ಯಕ್ತಿಯ ನಡುವೆ ಮಾತಿನ ಚಕಮಕಿ ನಡೆದಿದೆ.
ಆರಂಭದಲ್ಲಿ ಮಾತಿನ ವಾಗ್ವಾದಕ್ಕೆ ಸೀಮಿತವಾಗಿದ್ದ ಜಗಳ ಕ್ಷಣಾರ್ಧದಲ್ಲಿ ತಾರಕಕ್ಕೇರಿದೆ. ಆಕ್ರೋಶಗೊಂಡ ವ್ಯಕ್ತಿ ಮಹಿಳೆ ಎಂಬುದನ್ನೂ ಲೆಕ್ಕಿಸದೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾನೆ. ಅಷ್ಟಕ್ಕೇ ನಿಲ್ಲದೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ನಡು ರಸ್ತೆಯಲ್ಲೇ ನಡೆದ ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕರ ಎದುರೇ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಘಟನೆಯಿಂದ ಆಕ್ರೋಶ ವ್ಯಕ್ತವಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಲ್ಲೆ ನಡೆಸಿದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಘಟನೆ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
