ಬೆಳಗಾವಿ ಸ್ಮಾರ್ಟ್ ಸಿಟಿ ಹಾಗೂ ಮಹಾನಗರ ಪಾಲಿಕೆಯಲ್ಲಿ ನಡೆದಿರುವ ಭಾರಿ ಅಕ್ರಮ ವಿರುದ್ಧ ಸಾಮಾಜಿಕ ಹೋರಾಟಗಾರ ಮಂಜುನಾಥ್ ಬನಶಂಕರಿ ಗಾಂಧಿ ಜಯಂತಿಯಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಅನರ್ಹ ಅಧಿಕಾರಿಗಳ ನೇಮಕಾತಿ ಮತ್ತು ಸ್ವಜನಪಕ್ಷಪಾತದ ವಿರುದ್ಧ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.


ಬೆಳಗಾವಿಯಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಉಪವಾಸ ಸತ್ಯಾಗ್ರಹದಲ್ಲಿ ಹೋರಾಟಗಾರ ಮಂಜುನಾಥ್ ಬನಶಂಕರಿ ಅವರು ಸ್ಮಾರ್ಟ್ ಸಿಟಿ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್ ಅಥವಾ ಕೆಎಎಸ್ ಅಧಿಕಾರಿಯಾಗಿರಬೇಕೆಂಬ ನಿಯಮವಿದ್ದರೂ, ಸಮಾಜ ಕಲ್ಯಾಣ ಇಲಾಖೆಯಿಂದ ನಾನ್-ಐಎಎಸ್ ಹಾಗೂ ನಾನ್-ಕೆಎಎಸ್ ಅಧಿಕಾರಿಯಾದ ಕವಿತಾ ವರಂಗಲ್ ಅವರನ್ನು ನಿಯೋಜಿಸಲಾಗಿದೆ ಎಂದು ದೂರಿದ್ದಾರೆ. ಅಲ್ಲದೆ, ಕಂಪನಿ ಸೆಕ್ರೆಟರಿ ನೇಮಕಾತಿಯಲ್ಲಿನ ಅಕ್ರಮಗಳು, ಪಿಐಡಿ ಪ್ರಾಪರ್ಟಿ ವಿಚಾರದಲ್ಲಿ ಪಾಲಿಕೆ ಕಮಿಷನರ್ ನಡೆ ಹಾಗೂ ಎಂಡಿ ಪತಿ ಉದಯಕುಮಾರ್ ತಳವಾರ್ ಅವರ ಅಕ್ರಮ ವರ್ಗಾವಣೆ ಹಾಗೂ ಸ್ವಜನಪಕ್ಷಪಾತದ ಕುರಿತು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರ ಸೇವೆಗಳನ್ನು ಮಾರಾಟಕ್ಕಿಟ್ಟಂತೆ ವರ್ತಿಸುತ್ತಿದ್ದು, ತಪ್ಪು ಮಾಡಿದ ಅಧಿಕಾರಿಗಳನ್ನು ಕೂಡಲೇ ಸಸ್ಪೆಂಡ್ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂಜುನಾಥ್ ಆಗ್ರಹಿಸಿದ್ದಾರೆ. ತಮಗೆ ನ್ಯಾಯ ಸಿಗುವವರೆಗೆ ಸ್ಥಳದಲ್ಲೇ ಉಪವಾಸ ಸತ್ಯಾಗ್ರಹ ಮುಂದುವರೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
