ನಗರದ ಸಹ್ಯಾದ್ರಿ ನಗರದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಮನೆಯಲ್ಲಿದ್ದ ಇಬ್ಬರು ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಹ್ಯಾದ್ರಿ ನಗರದ ಶ್ರೀದೇವಿ ಜೋಶಿ ಅವರಿಗೆ ಸೇರಿದ ಮೊದಲ ಮಹಡಿಯ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಈ ಮನೆಯಲ್ಲಿ ರೂಪಾ ನಾಶಿಪುಡಿ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಬಾಡಿಗೆಗೆ ವಾಸವಾಗಿದ್ದಾರೆ.
ಅಮಾವಾಸ್ಯೆ ಹಿನ್ನೆಲೆಯಲ್ಲಿ ರೂಪಾ ಅವರು ಮನೆಗೆ ಬೀಗ ಹಾಕಿ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಒಳಗಿದ್ದ ಮಕ್ಕಳು ಚೀರಾಡಿದ್ದಾರೆ. ಮಕ್ಕಳ ಚೀರಾಟ ಕೇಳಿದ ಮನೆ ಮಾಲಕಿ ಶ್ರೀದೇವಿ ಜೋಶಿ ಅವರು ತಕ್ಷಣ ಧಾವಿಸಿ, ಹೊಗೆ ತುಂಬಿದ್ದ ಮನೆಯಿಂದ ಇಬ್ಬರು ಮಕ್ಕಳನ್ನು ಸುರಕ್ಷಿತವಾಗಿ ಹೊರತಂದಿದ್ದಾರೆ.
ಸಮಯಪ್ರಜ್ಞೆಯಿಂದ ಮಕ್ಕಳನ್ನು ರಕ್ಷಿಸಿದ ಶ್ರೀದೇವಿ ಜೋಶಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಘಟನೆ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
