ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ನೌಕರರ ಪಿಎಫ್ ಮತ್ತು ಎನ್ಪಿಎಸ್ ಹೆಸರಿನಲ್ಲಿ ಬರೋಬ್ಬರಿ 32 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಅಕ್ರಮವಾಗಿ ಡ್ರಾ ಮಾಡಿಕೊಂಡು ವಂಚಿಸಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ನಗರ ಪೊಲೀಸ್ ಆಯುಕ್ತರಾದ ಪ್ರಕಾಶ್ ನಿಕಮ್ ಅವರು ಮಾಹಿತಿಯನ್ನು ನೀಡಿದರು. ಬೆಳಗಾವಿ ಜಿಲ್ಲೆಯ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕೆಲ ಸಿಬ್ಬಂದಿ ಹಾಗೂ ಎಫ್ಡಿಎಗಳು ಈ ಅಕ್ರಮ ಎಸಗಿರುವುದು ತನಿಖೆಯಿಂದ ತಿಳಿದುಬಂದಿದೆ. ವಿಶ್ವವಿದ್ಯಾಲಯದ ಆನ್ಲೈನ್ ಬ್ಯಾಂಕ್ ಅಕೌಂಟ್ನಿಂದ ಇಪಿಎಫ್ ಹಾಗೂ ಎನ್ಪಿಎಸ್ ಅರಿಯರ್ಸ್ಗಳ ಹೆಸರನ್ನು ದುರುಪಯೋಗಪಡಿಸಿಕೊಂಡು, 2020 ರಿಂದ 2023ರ ಅವಧಿಯಲ್ಲಿ ಒಟ್ಟು 32,01,546 ರೂಪಾಯಿಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ವತಿಯಿಂದ ನೀಡಲಾದ ದೂರಿನ ಮೇರೆಗೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು ನಾಲ್ವರು ಈ ವಂಚನೆಯಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದ್ದು, ಪ್ರಸ್ತುತ ಪೊಲೀಸರು ಒಳ ತನಿಖೆ ಹಾಗೂ ಮುಂದುವರಿದ ಆಡಿಟ್ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದಾರೆ.
