Vijaypura

ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಘೋಷಿಸಿ: ನಡಹಳ್ಳಿ

Share

ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ರೈತರ ಖಾತೆಗೆ ತಕ್ಷಣ ₹25 ಸಾವಿರ ಪರಿಹಾರ ಜಮೆ ಮಾಡಬೇಕು. ಜೊತೆಗೆ ರೈತರ ಸಾಲಮನ್ನಾ ಮಾಡಿ, ಬೆಳೆ ವಿಮೆ ಕಟ್ಟಿರುವ ರೈತರಿಗೆ ವಿಮಾ ಕಂಪನಿಗಳಿಂದ ಮೊದಲ ಕಂತಿನ ಹಣವನ್ನು ಕೂಡಲೇ ಬಿಡುಗಡೆ ಮಾಡಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಆಗ್ರಹಿಸಿದರು.

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2023ರ ಬಳಿಕ ಇದೀಗ ಮತ್ತೊಮ್ಮೆ ತೀವ್ರ ಬರಗಾಲ ಆವರಿಸಿದೆ. ರಾಜ್ಯದಲ್ಲಿ ಶೇ.30ರಷ್ಟು ಮಾತ್ರ ಮಳೆಯಾಗಿದ್ದು, 190 ತಾಲೂಕುಗಳಲ್ಲಿ ಬರವಿದೆ ಎಂದು ಸರ್ಕಾರವೇ ಹೇಳಿದೆ. ಆದರೆ ಕೇವಲ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ಟೀಕಿಸಿದರು.
ಉತ್ತರ ಕರ್ನಾಟಕದ 91 ತಾಲೂಕುಗಳಲ್ಲಿ ಬರವಿದ್ದರೂ ಕೇವಲ 21 ತಾಲೂಕುಗಳನ್ನು ಘೋಷಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಅಧಿಕಾರಿಗಳು ವೈಜ್ಞಾನಿಕವಾಗಿ ಬರ ಸಮೀಕ್ಷೆ ನಡೆಸಿಲ್ಲ. ಸರ್ಕಾರದ ಬರದ ವರದಿಯೇ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ 2023ರಲ್ಲಿ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ಆಗ ಕೇಂದ್ರದ ಮಾನದಂಡಗಳು ಅಡ್ಡಿಯಾಗಿರಲಿಲ್ಲವೇ ಎಂದು ಪ್ರಶ್ನಿಸಿದ ನಡಹಳ್ಳಿ, ಕೇಂದ್ರದ ಪರಿಹಾರದ ಜೊತೆಗೆ ರಾಜ್ಯ ಸರ್ಕಾರ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು ಎಂದರು.
ರಾಜ್ಯದಲ್ಲಿ 1.20 ಕೋಟಿ ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದ್ದು, ಸುಮಾರು 90 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ 7.60 ಲಕ್ಷ ಹೆಕ್ಟೇರ್ ಮುಂಗಾರು ಬೆಳೆ ಹಾನಿಯಾಗಿದ್ದು, 3.42 ಲಕ್ಷ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಹೇಳಿದರು.
ಉಸ್ತುವಾರಿ ಸಚಿವರು ಹಾಗೂ ಶಾಸಕರ ನಡುವೆ ಸಮನ್ವಯದ ಕೊರತೆಯಿಂದ ಜಿಲ್ಲೆ ಅನಾಥವಾಗಿದೆ. ಮಂತ್ರಿ ಸ್ಥಾನಕ್ಕಾಗಿ ಕಣ್ಣೀರು ಹಾಕುವ ಬದಲು ರೈತರಿಗಾಗಿ ಶಾಸಕರು ಕಣ್ಣೀರು ಹಾಕಲಿ ಎಂದು ವ್ಯಂಗ್ಯವಾಡಿದರು.
ರೈತರ ಉಳಿವಿಗಾಗಿ ಮೊದಲು ವಿಧಾನಸಭಾ ಕ್ಷೇತ್ರಗಳಲ್ಲಿ ಹೋರಾಟ ನಡೆಸಿ, ಬಳಿಕ ಸರ್ಕಾರ ಸ್ಪಂದಿಸುವವರೆಗೆ ಗ್ರಾಮ ಚಲೋ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

Tags:

error: Content is protected !!