ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಸಡಗರ, ಸಂಭ್ರಮದಿಂದ ಅದ್ದೂರಿ ಚಾಲನೆ ನೀಡಲಾಯಿತು.

ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷರು ಹಾಗೂ ಬಸವ ಭಕ್ತರು ಸಕಲ ವಾದ್ಯ ವೈಭವದೊಂದಿಗೆ ಆನೆ ಮೆರವಣಿಗೆಯಲ್ಲಿ ದೇವಸ್ಥಾನ ದಿಂದ ವಿರಕ್ತಮಠಕ್ಕೆ ತೆರಳಿ ಸಿದ್ದಲಿಂಗ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆದರು. ಬಳಿಕ ಸಿದ್ದಲಿಂಗ ಮಹಾಸ್ವಾಮೀಜಿಗಳು ಹಾಗೂ ಶಿವಾನಂದ ಈರಕಾರ ಮುತ್ಯಾ ಅವರನ್ನು ಸಕಲ ವಾದ್ಯ ವೈಭವದೊಂದಿಗೆ ಬಸವ ಸ್ಮಾರಕದ ಮೂಲಕ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಕರೆತರಲಾಯಿತು. ದೇವಸ್ಥಾನ ದಲ್ಲಿ ನಂದಿ ಮೂರ್ತಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಲಾಯಿತು. ಶ್ರೀಗಳ ಸಮ್ಮುಖದಲ್ಲಿ ಮಾಜಿ ಸಚಿವ ಎಸ್. ಶಿವಾನಂದ ಪಾಟೀಲ ಅವರು ನಂದಿ ಉತ್ಸವ ಮೂರ್ತಿಯನ್ನು ಅಲಂಕೃತ ಬೆಳ್ಳಿ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.
ಬಳಿಕ ಭಕ್ತರ ಜಯಘೋಷ ದೊಂದಿಗೆ ಪಲ್ಲಕ್ಕಿ ಉತ್ಸವ ಮೆರವಣಿಗೆ ಶ್ರೀ ಶಿವಪ್ಪ ಮೋದಿ ಅವರ ಮನೆಗೆ ತೆರಳಿ ಕಳಸಕ್ಕೆ ಪೂಜೆ ಸಲ್ಲಿಸಲಾಯಿತು. ನಿಡಗುಂದಿ ಮನೆತನದವರು ಕಳಸವನ್ನು ಹೊತ್ತುಕೊಂಡು ಅಗಸಿ ಹಾಗೂ ಇಂಗಳೇಶ್ವರ ರಸ್ತೆ ಮಾರ್ಗವಾಗಿ ಮೆರವಣಿಗೆ ಮುಂದುವರಿಯಿತು. ಸಕಲ ವಾದ್ಯ ವೈಭವದೊಂದಿಗೆ ಪಲ್ಲಕ್ಕಿ ಉತ್ಸವವು ಹೊರೀಮಟ್ಟಿ ಗುಡ್ಡ ತಲುಪಿತು. ಹೊರೀಮಟ್ಟಿ ಗುಡ್ಡದಲ್ಲಿ ಶಿವಾನಂದ ಈರಕಾರ ಮುತ್ಯಾ ಅವರಿಂದ ವರ್ಷದ ಮಳೆ-ಬೆಳೆ ಕುರಿತು ನುಡಿ ನಡೆಯಿತು. ಬಳಿಕ ಪಲ್ಲಕ್ಕಿಯು ಬಸವನಹಟ್ಟಿ ಬುತ್ತಿ ಬಸವಣ್ಣ ದೇವಸ್ಥಾನಕ್ಕೆ ತೆರಳಿತು. ಅಲ್ಲಿ ಭಕ್ತರು ಪೂಜೆ ಸಲ್ಲಿಸಿದ ನಂತರ ಸಂಜೆ ಬಸವೇಶ್ವರ ದೇವಸ್ಥಾನಕ್ಕೆ ಮರಳಿತು. ಮೆರವಣಿಗೆಯಲ್ಲಿ ಈರಣ್ಣ ಪಟ್ಟಣಶೆಟ್ಟಿ, ಶ್ರೀಕಾಂತ ಕೊಟ್ರಶೆಟ್ಟಿ, ಶಂಕರಗೌಡ ಬಿರಾದಾರ, ಬಸವರಾಜ ಹಾರಿವಾಳ, ಸುರೇಶ ಹಾರಿವಾಳ, ಶೇಖರ ಗೊಳಸಂಗಿ, ಎಂ.ಜಿ. ಆದಿಗೊಂಡ, ಅಶೋಕ ಹಾರಿವಾಳ, ರವಿ ಪಟ್ಟಣಶೆಟ್ಟಿ, ಸಂಗಮೇಶ ಓಲೇಕಾರ, ರವಿಗೌಡ ಚಿಕ್ಕೊಂಡ, ಭರತು ಅಗರವಾಲ, ಜಗದೀಶ್ ಕೊಟ್ರಶೆಟ್ಟಿ ಸೇರಿದಂತೆ ಊರಿನ ಮುಖಂಡರು ಹಾಗೂ ಅಪಾರ ಸಂಖ್ಯೆಯ ಬಸವ ಭಕ್ತರು ಉಪಸ್ಥಿತರಿದ್ದರು.
