Nandagad

ನಂದಗಡದಲ್ಲಿ ಎಸ್‌ಐಆರ್ ನೋಟಿಸ್‌ಗೆ ಶಾಲಾ ಮಕ್ಕಳ ಬಳಕೆ: ಬಿಎಲ್‌ಒ ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕ ಆಕ್ರೋಶ

Share

ಖಾನಾಪೂರ ತಾಲೂಕಿನ ನಂದಗಡ ಗ್ರಾಮದ ರಾಯಾಪೂರ ಓಣಿಯಲ್ಲಿ ಎಸ್‌ಐಆರ್ (SIR) ಮತದಾರರ ಪರಿಷ್ಕರಣೆ ಪ್ರಕ್ರಿಯೆಯ ಲೋಪದೋಷ ಸರಿಪಡಿಸುವ ನೋಟಿಸ್ ನೀಡಲು ಶಾಲಾ ಮಕ್ಕಳನ್ನು ಬಲವಂತವಾಗಿ ಬಳಸಿಕೊಂಡಿರುವ ಗಂಭೀರ ಆರೋಪ ರಾಯಾಪೂರ ಸರಕಾರಿ ಶಾಲೆಯ ಮುಖ್ಯಗುರು ಹಾಗೂ ಬಿಎಲ್‌ಒ (BLO) ಆರ್.ಪಿ. ಡಿಸೋಜಾ ಅವರ ವಿರುದ್ಧ ಕೇಳಿಬಂದಿದೆ.

ವಿದ್ಯಾರ್ಥಿಗಳನ್ನು ಮನೆ-ಮನೆಗೆ ಕಳುಹಿಸಿ ನೋಟಿಸ್ ಹಂಚಿಸುತ್ತಿರುವ ದೃಶ್ಯವನ್ನು ಪ್ರಶ್ನಿಸಿದ ಖಾನಾಪೂರ ತಾಲೂಕಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಬಾಬು ಹತ್ತರವಾಡ ಅವರಿಗೆ ಬಿಎಲ್‌ಒ ಡಿಸೋಜಾ ಯಾವುದೇ ಪಶ್ಚಾತಾಪವಿಲ್ಲದೆ, “ನಾವೇನು ಹೆದರುವುದಿಲ್ಲ” ಎಂದು ಹಾರಿಕೆಯ ಹಾಗೂ ಉಡಾಫೆಯ ಉತ್ತರ ನೀಡಿ ವಾದಕ್ಕಿಳಿದಿರುವುದು ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕಾದ ಶಿಕ್ಷಕಿಯೊಬ್ಬರು ಸಾಂವಿಧಾನಿಕ ಜವಾಬ್ದಾರಿಯ ಮರೆಯಲ್ಲಿ ಕಿರಿಯ ಮಕ್ಕಳನ್ನು ವೈಯಕ್ತಿಕ ಹಾಗೂ ಅಧಿಕೃತ ಕರ್ತವ್ಯಗಳಿಗೆ ಬಳಸಿಕೊಳ್ಳುತ್ತಿರುವುದು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಕುರಿತು ಸ್ಥಳೀಯರು ಹಾಗೂ ಮುಖಂಡರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಾಲೂಕಾಡಳಿತಕ್ಕೆ ದೂರು ನೀಡಿದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ಮೇಲಾಧಿಕಾರಿಗಳ ಮೌನ ಸಮ್ಮತಿಯನ್ನು ತೋರುತ್ತಿದ್ದು, ಕೂಡಲೇ ಸಂಬಂಧಪಟ್ಟ ಇಲಾಖೆಯು ಈ ಬೇಜವಾಬ್ದಾರಿ ಶಿಕ್ಷಕಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬಂದಿದೆ.

Tags:

error: Content is protected !!