bagalkot

ಗಣೇಶ ವಿಸರ್ಜನೆ ಮುಗಿಸಿ ಮರಳುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ

Share

ಕೃಷ್ಣಾ ನದಿಯಲ್ಲಿ ಗಣೇಶ ವಿಸರ್ಜನೆ ಮುಗಿಸಿ ಸಂಭ್ರಮದಿಂದ ವಾಪಸ್ ಬರ್ತಿದ್ದವರ ಟ್ರ್ಯಾಕ್ಟರ್ ಪಲ್ಟಿಯಾಗಿ, ಓರ್ವ ಬಾಲಕನ ಕೈ ಕಟ್ ಆಗಿರುವ ಹಾಗೂ ಮತ್ತೊಬ್ಬನಿಗೆ ತಲೆಗೆ ಗಂಭೀರ ಪೆಟ್ಟು ಬಿದ್ದಿರುವ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿ ನಡೆದಿದೆ.

ಹುನಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಒಟ್ಟು 11 ಜನ ಗಾಯಗೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಎಮ್ಮೆಟ್ಟಿ ಗ್ರಾಮದ ಗ್ರಾಮಸ್ಥರು ಕೃಷ್ಣಾ ನದಿಯಲ್ಲಿ ಗಣೇಶ ವಿಸರ್ಜನೆ ನೆರವೇರಿಸಿ ಟ್ರ್ಯಾಕ್ಟರ್‌ನಲ್ಲಿ ವಾಪಸ್ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ಭೀಕರ ಅವಘಡ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಟ್ರ್ಯಾಕ್ಟರ್‌ನಲ್ಲಿದ್ದ 11 ಜನರಿಗೆ ಗಾಯಗಳಾಗಿವೆ.

ಈ ದುರ್ಘಟನೆಯಲ್ಲಿ 15 ವರ್ಷದ ಬಾಲಕ ಅನಿಲ್ ದಡ್ಡಿ ಎಂಬುವವರ ಕೈ ಕಟ್ ಆಗಿದ್ದು, ವಿಜಯಕುಮಾರ್ ನಾಯ್ಕರ್ (25) ಎಂಬುವವರ ತಲೆಗೆ ತೀವ್ರ ಪೆಟ್ಟಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 9 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!