ಸರ್ಕಾರಿ ನೌಕರರಿಗೆ ವಯೋಮಿತಿ ನಿಗದಿಯಿರುವಾಗ ರಾಜಕಾರಣಿಗಳಿಗೇಕೆ ಇಲ್ಲ ಎಂಬ ಗಂಭೀರ ಚರ್ಚೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಮುನ್ನೆಲೆಗೆ ತಂದಿದ್ದಾರೆ. ರಾಜಕಾರಣಿಗಳಿಗೂ ನಿವೃತ್ತಿ ವಯಸ್ಸು ಇರಲಿ ಎಂದಿದ್ದಾರೆ.


ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಮುಖ ಆಗ್ರಹವೊಂದನ್ನು ಮಂಡಿಸಿದ್ದಾರೆ. ವಿಧಾನಸಭೆ, ವಿಧಾನ ಪರಿಷತ್ ಹಾಗೂ ಸಂಸತ್ ಸದಸ್ಯರಿಗೂ ವಯೋಮಿತಿ ಅನ್ವಯವಾಗುವಂತೆ ಹೊಸ ಕಾಯ್ದೆಯನ್ನು ರೂಪಿಸುವ ಅನಿವಾರ್ಯತೆಯಿದ್ದು, ಈ ನಿಟ್ಟಿನಲ್ಲಿ ಶಾಸನ ಸಭೆ ಸದಸ್ಯರ ನಿವೃತ್ತಿಗಾಗಿ ಒಂದು ಬೃಹತ್ ಆಂದೋಲನವೇ ಮೂಡಿಬರಬೇಕೆಂದು ಅವರು ಕರೆ ನೀಡಿದ್ದಾರೆ. ಸರ್ಕಾರಿ ನೌಕರರಂತೆ ಚುನಾಯಿತ ಪ್ರತಿನಿಧಿಗಳಿಗೂ ನಿವೃತ್ತಿ ವಯಸ್ಸನ್ನು ನಿಗದಿಪಡಿಸುವ ಮೂಲಕ ಹೊಸ ಪೀಳಿಗೆಗೆ ರಾಜಕೀಯದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಬೇಕು. ಹಿರಿಯ ನಾಯಕರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದರೆ ಮಾತ್ರ ಯುವ ಪೀಳಿಗೆಯು ಧೈರ್ಯವಾಗಿ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
