ಡೆವಲಪರ್ನಿಂದ ಭೂಮಿ ‘ಅ’ ಖರಾಬ್ ತೆಗೆಯಲು ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟು, ಮುಂಗಡವಾಗಿ 50 ಲಕ್ಷ ರೂಪಾಯಿ ನಗದು ಸ್ವೀಕರಿಸುತ್ತಿದ್ದ ವೇಳೆ ಧಾರವಾಡ ತಹಶೀಲ್ದಾರ್ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಘಟನೆ ಧಾರವಾಡದ ಕೆಸಿಡಿ ಮೈದಾನದ ಬಳಿ ನಡೆದಿದೆ.


ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಭೂಮಿಯ ‘ಅ’ ಖರಾಬ್ ತೆಗೆಯಲು ಮುದೋಳ ಮೂಲದ ಡೆವಲಪರ್ ಮಂಜುನಾಥ್ ಬಳಿ ಒಂದು ಕೋಟಿ ರೂಪಾಯಿಗೆ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 50 ಲಕ್ಷ ರೂಪಾಯಿ ಹಣ ಪಡೆಯುವಾಗ ತಹಶೀಲ್ದಾರ್ ಸಚ್ಚಿದಾನಂದ ಲೋಕಾಯುಕ್ತರ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಧಾರವಾಡ ತಾಲೂಕಿನ ಯರಿಕೊಪ್ಪ ಬಳಿ ಡೆವಲಪರ್ ಮಂಜುನಾಥ್ ಜಮೀನು ಖರೀದಿಸಿದ್ದು, ಜಮೀನಿನಲ್ಲಿನ ‘ಅ’ ಖರಾಬ್ ತೆಗೆದು ಡೆವಲಪ್ಮೆಂಟ್ ಮಾಡಲು ದಾಖಲಾತಿಗಳನ್ನು ಸರಿಮಾಡಿಕೊಳ್ಳಲು ಮುಂದಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ತಹಶೀಲ್ದಾರ್ ತಮ್ಮ ಹಣದಾಸೆ ತೀರಿಸಿಕೊಳ್ಳಲು ಡೆವಲಪರ್ಗೆ ಲಂಚದ ಬೇಡಿಕೆ ಒಡ್ಡಿದ್ದಾರೆ. ಇದರ ಕುರಿತು ಡೆವಲಪರ್ ಮಂಜುನಾಥ್ ಧಾರವಾಡ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಕೂಡಲೇ ಅಲರ್ಟ್ ಆದ ಲೋಕಾಯುಕ್ತ ಅಧಿಕಾರಿಗಳು 50 ಲಕ್ಷ ರೂಪಾಯಿ ಹಣ ಪಡೆಯುವಾಗಲೇ ರೆಡ್ ಹ್ಯಾಂಡಾಗಿ ತಹಶೀಲ್ದಾರ್ ಸಚ್ಚಿದಾನಂದ ಅವರನ್ನು ಲಾಕ್ ಮಾಡಿದ್ದಾರೆ. ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆದಿದ್ದು, ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಲೋಕಾಯುಕ್ತ ಎಸ್ಪಿಯವರು, ರಾಜ್ಯದಲ್ಲಿ ಇದೊಂದು ದೊಡ್ಡ ದಾಳಿಯಾಗಿದೆ ಎಂದಿದ್ದಾರೆ. ಬಾಗಲಕೋಟೆ ಮೂಲದ ಮಂಜುನಾಥ್ ಅನ್ನೋ ಡೆವಲಪರ್ ಯರಿಕೊಪ್ಪದಲ್ಲಿ 33 ಎಕರೆ ಭೂಮಿ ಖರೀದಿಸಿದ್ದಾರೆ. ಖರಾಬ್ ಒಂದು ಕಡೆ, ಸಾಗುವಳಿ ಒಂದು ಕಡೆ ಸರ್ವೆ ಮಾಡಿದ್ದರು, ಎಡಿಎಲ್ಆರ್ ಅವರು ಹಿಂದೆ ಪೋಡಿ ಮಾಡಿರುವ ಆದೇಶವನ್ನು ತಹಶೀಲ್ದಾರ್ ರದ್ದು ಮಾಡಿದ್ದರು. ಜತೆಗೆ ತಹಶೀಲ್ದಾರ್ಗೆ ಎಡಿಎಲ್ಆರ್ ಖರಾಬ್, ಸಾಗುವಳಿ ಎಲ್ಲಿ ಬರುತ್ತದೆ ಎನ್ನುವ ಬಗ್ಗೆ ಪ್ರಪೋಸಲ್ ಕಳುಹಿಸಿದ್ದರು. ಒಂದು ಎಕರೆ ಜಮೀನು ಹಾಗೂ ಒಂದು ಕೋಟಿ ರೂ. ಕ್ಯಾಶ್ ಅಮೌಂಟ್ ಕೇಳಿದ್ದಾರೆ. ಹಣ ಪಡೆಯುವಾಗ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ಅವರನ್ನು ಟ್ರ್ಯಾಪ್ ಮಾಡಿದ್ದೇವೆ. ಬುಧವಾರ ರಾತ್ರಿ 9:30 ಗಂಟೆ ಸುಮಾರಿಗೆ ಲೋಕಾಯುಕ್ತ ದಾಳಿ ಆಗಿದೆ. ಕೆಸಿಡಿ ಹತ್ತಿರ ಬರೋಕೆ ಹೇಳಿ 50 ಲಕ್ಷ ರೂಪಾಯಿ ಹಣ ಪಡೆಯುತ್ತಿದ್ದರು. ಕ್ಯಾಶ್ ಪಡೆಯುತ್ತಿದ್ದ ವೇಳೆ ದಾಳಿ ಮಾಡಿ ತಹಶೀಲ್ದಾರ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
