ನಿಸ್ವಾರ್ಥ ಸೇವೆ ಸಲ್ಲಿಸಿ ದೇಶ ಕಾಯ್ದ ಮಾಜಿ ಸೈನಿಕರೊಬ್ಬರು ತಮಗೆ ಬರಬೇಕಾದ ಹಕ್ಕಿನ ಭೂಮಿಗಾಗಿ ಎರಡು ದಶಕಗಳಿಂದ ಕಚೇರಿಗಳ ಅಲೆದಾಟ ನಡೆಸಿ ಕಂಗಾಲಾಗಿದ್ದಾರೆ. ಸರ್ಕಾರದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಮನನೊಂದು ಅವರು ತಹಶೀಲ್ದಾರ್ ಕಚೇರಿಯಲ್ಲೇ ಕಠಿಣ ನಿರ್ಧಾರ ಕೈಗೊಳ್ಳುವ ಹಂತಕ್ಕೆ ತಲುಪಿದ್ದು, ಈ ಘಟನೆ ಈಗ ವ್ಯವಸ್ಥೆಯ ಕಣ್ಣು ತೆರೆಸಬೇಕಿದೆ.

ಮರಾಠ ಲೈಟ್ ಇನ್ಫೆಂಟ್ರಿಯ ಮಾಜಿ ಸೈನಿಕರಾದ ಶಿವಾನಂದ ರೆಡ್ಡಿ ಅವರು ಜಮ್ಮು-ಕಾಶ್ಮೀರದ ಕಾರ್ಗಿಲ್ ಯುದ್ಧದ ಸಮಯದಲ್ಲೂ ಸೇರಿದಂತೆ ಸುಮಾರು 17 ವರ್ಷಗಳಿಗೂ ಅಧಿಕ ಕಾಲ ದೇಶದ ಸೇವೆ ಸಲ್ಲಿಸಿ, ಕರ್ತವ್ಯದ ವೇಳೆ ಗಂಭೀರ ಗಾಯಗೊಂಡು ವೈದ್ಯಕೀಯ ಕಾರಣಗಳಿಂದ ಬಿಡುಗಡೆಗೊಂಡಿದ್ದರು. ನಿಯಮಾನುಸಾರ ಮಾಜಿ ಸೈನಿಕರ ಕೋಟಾದಡಿ ವ್ಯವಸಾಯಕ್ಕೆ ಭೂಮಿ ಕೋರಿ ಅವರು ಕಳೆದ ಎರಡು ದಶಕಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಹಶೀಲ್ದಾರ್ ಕಚೇರಿ ಸೇರಿದಂತೆ ವಿವಿಧ ಅಧಿಕೃತ ಕಚೇರಿಗಳಿಗೆ ಅಲೆದಾಡುತ್ತಲೇ ಇದ್ದಾರೆ. ಸ್ವತಃ ಮರಾಠಾ ಲೈಟ್ ಇನ್ಫೆಂಟ್ರಿಯ ಹಿರಿಯ ದಾಖಲಾತಿ ಅಧಿಕಾರಿಯೂ ಸಹ ಇವರ ಅರ್ಡಿಯನ್ನು ಪರಿಗಣಿಸುವಂತೆ 2021ರಲ್ಲೇ ಪತ್ರ ಬರೆದು ಶಿಫಾರಸು ಮಾಡಿದ್ದರೂ, ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಸಕರಾತ್ಮಕವಾಗಿ ಸ್ಪಂದಿಸಿಲ್ಲವೆಂಬ ಗಂಭೀರ ಆರೋಪ ಕೇಳಿಬಂದಿದೆ.
ಅಧಿಕಾರಿಗಳ ನಿರಾಸಕ್ತಿ ಮತ್ತು ಕಚೇರಿಯ ಅಲೆದಾಟದಿಂದ ತೀವ್ರ ನೊಂದಿರುವ ಶಿವಾನಂದ ರೆಡ್ಡಿ ಅವರು ನ್ಯಾಯಕ್ಕಾಗಿ ನಡೆಸಿದ ಹೋರಾಟವು ಕಡೆಗೆ ಕಚೇರಿಯಲ್ಲೇ ವಿಷ ಸೇವಿಸುವಂತಹ ದುರಂತ ಹಂತಕ್ಕೆ ತಿರುಗಿರುವುದು ಇಡೀ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸೈನಿಕರ ಈ ಗೋಳಿಗೆ ತಕ್ಷಣವೇ ಸ್ಪಂದಿಸಬೇಕಿರುವ ಜಿಲ್ಲಾಡಳಿತ ಮತ್ತು ಸರ್ಕಾರ, ಎಕ್ಸ್-ಸರ್ವಿಸಮೆನ್ ಕೋಟಾದಡಿ ಸಿಗಬೇಕಾದ ಭೂಮಿಯನ್ನು ಶೀಘ್ರವಾಗಿ ಮಂಜೂರು ಮಾಡುವ ಮೂಲಕ ಅವರ ಬದುಕಿಗೆ ಭದ್ರತೆ ಒದಗಿಸಿಕೊಡಬೇಕಿದೆ.
